
ಮರ್ಚೇಡ್ ಡೇಸ್ ಸುದ್ದಿ.
ಗಂಗಾವತಿ: ನಗರದ 28ನೇ ವಾರ್ಡ್‌ನ ಜನವಸತಿ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಮೊಬೈಲ್ ಟವರ್‌ನಿಂದ ಸ್ಥಳೀಯರಿಗೆ ಆರೋಗ್ಯ ಸಮಸ್ಯೆಗಳು ಹಾಗೂ ತೊಂದರೆ ಉಂಟಾಗುತ್ತವೆ, ಕೂಡಲೇ ಈ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಮಾಜಿ ನಗರಸಭೆ ಸದಸ್ಯ ಎಫ್. ರಾಘವೇಂದ್ರ ಅವರ ನೇತೃತ್ವದಲ್ಲಿ ವಾರ್ಡಿನ ನಿವಾಸಿಗಳು ಕೊಪ್ಪಳ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಮನವಿಗೆ ಸ್ಪಂದಿಸಿದ ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಅವರು, ಕೂಡಲೇ ಕಾಮಗಾರಿಯನ್ನು ನಿಲ್ಲಿಸುವಂತೆ ಗಂಗಾವತಿ ಪೌರಾಯುಕ್ತ ಆರ್. ವಿರೂಪಾಕ್ಷ ಮೂರ್ತಿ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಅಹವಾಲು ಸಲ್ಲಿಸಿದ ಸ್ಥಳೀಯರು, “ಟವರ್ ನಿರ್ಮಾಣವಾಗುತ್ತಿರುವ ಸ್ಥಳದ ಅಕ್ಕಪಕ್ಕದಲ್ಲೇ ಶಾಲೆ, ಚರ್ಚ್ ಮತ್ತು ಅನಾಥಾಶ್ರಮವಿದ್ದು, ಸುತ್ತಮುತ್ತ ನೂರಾರು ಕುಟುಂಬಗಳು ವಾಸಿಸುತ್ತಿವೆ. ಇಂತಹ ಜನನಿಬಿಡ ಪ್ರದೇಶದಲ್ಲಿ ಟವರ್ ಅಳವಡಿಸುವುದು ನಾಗರಿಕರ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ. ನೆಟ್‌ವರ್ಕ್ ಟವರ್‌ನಿಂದ ಹೊರಸೂಸುವ ರೇಡಿಯೇಶನ್‌ನಿಂದಾಗಿ ವಾರ್ಡಿನ ನಿವಾಸಿಗಳಲ್ಲಿ ಈಗಾಗಲೇ ಬೇರೆ ಸ್ಥಳಗಳಲ್ಲಿ ನಿರ್ಮಾಣ ಮಾಡಿರುವಂತಹ ಟವರ್ ನಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ವಿಶೇಷವಾಗಿ ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತ, ಅತಿಯಾದ ತೂಕ ಇಳಿಕೆ ಸೇರಿದಂತೆ ದೈಹಿಕ ಸಮಸ್ಯೆಗಳು ಕಂಡು ಬರುತ್ತಿವೆ. ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಟವರ್ ಅಳವಡಿಕೆಯಿಂದ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ನಿವಾಸಿಗಳು, ವಿಕಿರಣದ ಪ್ರಭಾವದಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡುವ ಭೀತಿಯಿದೆ. ಈ ಪ್ರದೇಶವು ವಸತಿ ಸಮುಚ್ಚಯಗಳನ್ನು ಹೊಂದಿರುವ ಬಡಾವಣೆಯಾಗಿದ್ದು, ಇಲ್ಲಿ ಯಾವುದೇ ಕಾರಣಕ್ಕೂ ಟವರ್ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಟವರ್ ನಿರ್ಮಾಣ ಮಾಡುವುದೇ ಆದಲ್ಲಿ, ಜನವಸತಿ ಇಲ್ಲದ ಖಾಲಿ ಪ್ರದೇಶಗಳಲ್ಲಿ ಅಳವಡಿಸಲಿ, ನಮ್ಮ ವಾರ್ಡಿನಿಂದ ಕಾಮಗಾರಿಯನ್ನು ಸಂಪೂರ್ಣವಾಗಿ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.
ಈ ಪ್ರತಿಭಟನಾ ಮನವಿ ಸಲ್ಲಿಕೆ ಕಾರ್ಯಕ್ರಮದಲ್ಲಿ ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ರಾಮಕೃಷ್ಣ, ವಾರ್ಡಿನ ಪ್ರಮುಖರಾದ ಬಸವರಾಜ ಕುರಗೋಡು, ಚಂದ್ರಶೇಖರ್ ಕುರುಗೋಡು, ಬಂಡಿ ರಾಮಣ್ಣ, ನಾಗರಾಜ ಆಚಾರ್ಯ, ಯಲ್ಲಪ್ಪ ಆಗಲೂರು, ಸುರೇಶ್, ರಾಜು ಆಗಲೂರು ಸೇರಿದಂತೆ 28ನೇ ವಾರ್ಡಿನ ಹೆಚ್ಚಿನ ಸಂಖ್ಯೆಯ ನಿವಾಸಿಗಳು ಪಾಲ್ಗೊಂಡು ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು. ಜನಸಂದಣಿ ಇರುವ ಪ್ರದೇಶದಲ್ಲಿನ ಟವರ್ ನಿರ್ಮಾಣ ವಿಚಾರ ಈಗ ವಾರ್ಡಿನಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ಕ್ರಮದತ್ತ ಎಲ್ಲರ ಚಿತ್ತ ನೆಟ್ಟಿದೆ.