
ಮರ್ಚೆಡ್ ಡೇಸ್ ಸುದ್ದಿ.
ಕೊಪ್ಪಳ: ಶಿಕ್ಷಣದಿಂದ ವಂಚಿತರಾದ ಹಾಗೂ ಹತ್ತನೇ ತರಗತಿಯಲ್ಲಿ ಅನುತ್ತೀರ್ಣರಾದ ಬಾಲಕಿಯರು ಮತ್ತು ಮಹಿಳೆಯರ ಬಾಳಿನಲ್ಲಿ ಹೊಸ ಭರವಸೆ ಮೂಡಿಸಲು ‘ಪ್ರಥಮ ಎಜುಕೇಶನ್ ಫೌಂಡೇಶನ್’ ಮುಂದಾಗಿದೆ. ನಗರದ ಬಿಜೆಪಿ ಕಚೇರಿ ರಸ್ತೆ ಮತ್ತು ಕೊಲ್ಲೂರ್ ಲೇಔಟ್ನಲ್ಲಿ ಸಂಸ್ಥೆಯ ನೂತನ ಬ್ಲಾಕ್ ಕಚೇರಿಗಳನ್ನು ಮಂಗಳವಾರ ವಿಧ್ಯುಕ್ತವಾಗಿ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಫೌಂಡೇಶನ್ನ ಶಿಕ್ಷಕ ಮುತ್ತಪ್ಪ ಮಾತ್ನಾಡಿ, “ನಮ್ಮ ಸಂಸ್ಥೆಯು ಸರ್ಕಾರೇತರ ಸ್ವಯಂಸೇವಾ ಸಂಸ್ಥೆಯಾಗಿದ್ದು, ‘ಸೆಕೆಂಡ್ ಚಾನ್ಸ್’ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸಿದ ಹಾಗೂ ಫೇಲಾದ ಬಾಲಕಿಯರಿಗೆ ಉಚಿತ ಶಿಕ್ಷಣ ಮತ್ತು ಮಾರ್ಗದರ್ಶನ ನೀಡುತ್ತಿದೆ. ಕೇವಲ ಪರೀಕ್ಷೆಗೆ ಸಿದ್ಧತೆ ಮಾತ್ರವಲ್ಲದೆ, ಸ್ವಯಂ ಉದ್ಯೋಗ ಕೈಗೊಳ್ಳಲು ಅಗತ್ಯವಿರುವ ವೃತ್ತಿಪರ ತರಬೇತಿಯನ್ನು ನೀಡುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ” ಎಂದು ತಿಳಿಸಿದರು.
ಫೌಂಡೇಶನ್ನ ಶಿಕ್ಷಕ ರಫಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನಡೆಸುತ್ತಿದ್ದು, ವಿದ್ಯಾರ್ಥಿನಿಯರಿಗೆ ಉಚಿತ ಪಠ್ಯಪುಸ್ತಕ ಹಾಗೂ ಪ್ರತಿ ವಿಷಯಕ್ಕೂ ಪರಿಣಿತ ಶಿಕ್ಷಕರಿಂದ ತರಬೇತಿ ನೀಡಲಾಗುತ್ತಿದೆ. ಕೊಪ್ಪಳದಲ್ಲಿ ಈಗಾಗಲೇ 949ಕ್ಕೂ ಹೆಚ್ಚು ಮಹಿಳೆಯರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಶಿಕ್ಷಣದಿಂದ ಹೊರಗುಳಿದವರು ಕೂಡಲೇ ನಮ್ಮ ಕಚೇರಿಯನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನ್ಯೂಸ್ ಫಸ್ಟ್ ವರದಿಗಾರ ರಾಜು ಬಿ.ಆರ್. ಅವರು ಶಿಕ್ಷಣದ ಮಹತ್ವದ ಕುರಿತು ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಫೌಂಡೇಶನ್ ತಂಡದ ನಾಯಕಿ ಶರಣಮ್ಮ, ಪ್ರಮುಖರಾದ ಕೀರ್ತಿ, ಶಿಕ್ಷಕ ಜಗದೀಶ್ ಸೇರಿದಂತೆ ಹಲವು ಗಣ್ಯರು ಹಾಗೂ ಫೌಂಡೇಶನ್ನ ಸಿಬ್ಬಂದಿ ಉಪಸ್ಥಿತರಿದ್ದರು.