
ಮರ್ಚೆಡ್ ಡೇಸ್ ಸುದ್ದಿ.
ಗಂಗಾವತಿ: ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಭೂ ವಿವಾದವೊಂದು ತಾರಕಕ್ಕೇರಿದ್ದು, ಮಾಜಿ ಶಾಸಕ ಬಸವರಾಜ್ ದಡೇಸಗೂರು ಅವರ ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲೆಸೆದು ಹಾನಿ ಮಾಡಿರುವ ಘಟನೆ ಇಂದು ಮುಂಜಾನೆ ನಡೆದಿದೆ. ನಗರದ ಕೊಪ್ಪಳ ರಸ್ತೆಯಲ್ಲಿರುವ ಶ್ರೀವಾರಿ ಕೆಫೆಯ ಪಾರ್ಕಿಂಗ್ ಸ್ಥಳದಲ್ಲಿ ಈ ಘಟನೆ ಸಂಭವಿಸಿದ್ದು, ಮಾಜಿ ಶಾಸಕರ ಕಾರಿನ ಹಿಂಭಾಗದ ಗ್ಲಾಸ್ ಹಾಗೂ ಟಿಪ್ಪರ್ನ ಗಾಜುಗಳು ಸಂಪೂರ್ಣ ಪುಡಿಯಾಗಿವೆ.
ಘಟನೆಯ ವಿವರಗಳ ಪ್ರಕಾರ, ಪಾಡುಗುತ್ತಿ ಗಾರ್ಡನ್ ಪಕ್ಕದಲ್ಲಿ ಮಾಜಿ ಶಾಸಕರು ಖರೀದಿಸಿದ್ದ ಜಮೀನಿನಲ್ಲಿ ಮರಂ ಮಣ್ಣು ತುಂಬುವ ಕಾರ್ಯ ನಡೆಯುತ್ತಿತ್ತು. ಈ ವೇಳೆ ಸ್ಥಳಕ್ಕೆ ಬಂದ ಒಂದು ಗುಂಪು ಏಕಾಏಕಿ ದಾಳಿ ನಡೆಸಿದೆ. ಕೇವಲ ಮಾಜಿ ಶಾಸಕರ ಕಾರಷ್ಟೇ ಅಲ್ಲದೆ, ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ನ ಗಾಜನ್ನು ಸಹ ದುಷ್ಕರ್ಮಿಗಳು ಪುಡಿ ಮಾಡಿದ್ದಾರೆ. ಈ ವೇಳೆ ಮಾಜಿ ಶಾಸಕರ ಮಗ ಮೌನೇಶ್ ದಡೇಸಗೂರು ಅವರ ಮೇಲೆ ಸಹ ಹಲ್ಲೆ ನಡೆದಿದೆ ಎಂದು ಸ್ಥಳದಲ್ಲಿದ್ದವರು ಮಾತನಾಡಿಕೊಳ್ಳುತ್ತಿದ್ದರು.
ಜಮೀನಿನ ಒಡೆತನಕ್ಕೆ ಸಂಬಂಧಿಸಿದ ವಿವಾದವೇ ಈ ದಾಳಿಗೆ ಮೂಲ ಕಾರಣ ಎನ್ನಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆಯ ಸಂಪೂರ್ಣ ಹಿನ್ನೆಲೆಯನ್ನು ಕೂಲಂಕುಶವಾಗಿ ತನಿಖೆ ಮಾಡಿ, ಈ ಕೃತ್ಯದಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನು ಬಂಧಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ನಗರದ ಸಾರ್ವಜನಿಕರು ಈ ಘಟನೆಯನ್ನು ಪೊಲೀಸರು ಈ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವುದನ್ನು ಸಾರ್ವಜನಿಕರು ಕಾತುರದಿಂದ ಕಾಯುತ್ತಿದ್ದಾರೆ.