

ಮರ್ಚೆಡ್ ಡೇಸ್ ಸುದ್ದಿ.
ಗಂಗಾವತಿ: ಅತಿಯಾದ ಸಾಲದ ಹೊರೆ ಮತ್ತು ಆರ್ಥಿಕ ಸಂಕಷ್ಟದಿಂದ ನೊಂದ ಚಿನ್ನದ ವ್ಯಾಪಾರಿಯೊಬ್ಬರು, ಪತ್ನಿ ಹಾಗೂ ಪುತ್ರನೊಂದಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಗರದ ಪ್ರಶಾಂತನಗರದಲ್ಲಿ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ನಗರದ ಪ್ರಸಿದ್ಧ ‘ಕಾಮಾಕ್ಷಿ ಜುವೆಲ್ಲರ್ಸ್’ ಮಾಲೀಕ ಪ್ರಕಾಶ ರಾಯಕರ್ (60), ಅವರ ಪತ್ನಿ ಪ್ರಭಾ (55) ಹಾಗೂ ಇಂಜಿನಿಯರಿಂಗ್ ಓದುತ್ತಿದ್ದ ಪುತ್ರ ಶಶಾಂಕ್ (20) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಹಲವು ದಶಕಗಳಿಂದ ಚಿನ್ನದ ವ್ಯಾಪಾರ ಮತ್ತು ಲೇವಾದೇವಿ ನಡೆಸುತ್ತಿದ್ದ ಪ್ರಕಾಶ ಅವರು, ಇತ್ತೀಚಿನ ದಿನಗಳಲ್ಲಿ ವ್ಯಾಪಾರದಲ್ಲಿ ಉಂಟಾದ ಭಾರಿ ನಷ್ಟದಿಂದಾಗಿ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದರು ಎಂದು ತಿಳಿದುಬಂದಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಪ್ರಕಾಶ ಅವರು ಖಾಸಗಿ ವ್ಯಕ್ತಿಗಳು, ಸೌಹಾರ್ದ ಸಹಕಾರಿ ಬ್ಯಾಂಕ್‌ಗಳು ಹಾಗೂ ಕೆಲ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕೋಟ್ಯಾಂತರ ರೂಪಾಯಿ ಸಾಲ ಮಾಡಿದ್ದರು. ಈ ಸಾಲದ ಬಾಧೆಯಿಂದಾಗಿ ತಾವು ವಾಸವಿದ್ದ ಸ್ವಂತ ಮನೆಯನ್ನು ಕಳೆದುಕೊಂಡಿದ್ದರು. ಮನೆ ಖರೀದಿಸಿದ್ದ ವ್ಯಕ್ತಿಯೊಬ್ಬರು ಅವರು ಕೂಡ ಹಣ ಮರುಪಾವತಿಸಲಾಗದೆ ಮಾನ್ವಿ ಪಟ್ಟಣ ಸಹಕಾರ ಬ್ಯಾಂಕ್ ಜಪ್ತಿ ಮಾಡಿದ್ದಾರೆಂದು ತಿಳಿದು ಬಂದಿದೆ, ಪ್ರಕಾಶ ಅವರು ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಶನಿವಾರ ಬೆಳಗಿನ ಜಾವ, ಪ್ರಕಾಶ ಅವರು ಪತ್ನಿ ಮತ್ತು ಪುತ್ರನೊಂದಿಗೆ ಕೊಪ್ಪಳ ರಸ್ತೆಯ ಪ್ರಶಾಂತನಗರದಲ್ಲಿರುವ ತಮ್ಮ ಹಳೆಯ ಮನೆಗೆ ಆಗಮಿಸಿ, ಅಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಎಸ್‌ಪಿ ಡಾ. ರಾಮ್ ಎಲ್. ಅರಸಿದ್ದಿ, ಡಿವೈಎಸ್‌ಪಿ ಜೆ.ಎನ್. ನ್ಯಾಮಗೌಡ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತರ ಕುಟುಂಬಸ್ಥರು ಈ ಸಾವಿನ ಹಿಂದೆ ಅನುಮಾನ ವ್ಯಕ್ತಪಡಿಸಿದ್ದು, ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ಪ್ರಕಾಶ ಅವರ ತಮ್ಮನವರು ನೀಡಿದ ದೂರಿನ ಮೇರೆಗೆ, ಘಟನೆಗೆ ಕಾರಣವಾದ ಆರ್ಥಿಕ ವ್ಯವಹಾರಗಳು ಮತ್ತು ಇತರ ಆಯಾಮಗಳ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಕರಣ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಸತ್ಯಾಸತ್ಯತೆ ಹೊರತರಲು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಮರಣೋತ್ತರ ವರದಿಯ ಬಳಿಕವಷ್ಟೇ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.