
ಮರ್ಚೆಡ್ ಡೇಸ್ ಸುದ್ದಿ.
ಕನಕಗಿರಿ: ತಾಲೂಕಿನ ಆಕಳಕುಂಪಿ ಗ್ರಾಮದಲ್ಲಿ ಸೋಮವಾರ ಸಾಯಂಕಾಲ ಸನಾತನ ಸಂಪ್ರದಾಯ ಹಾಗೂ ರೈತಾಪಿ ಸಂಸ್ಕೃತಿಯ ಪ್ರತೀಕವಾದ ಕಾರ ಹುಣ್ಣಿಮೆಯ ನಿಮಿತ್ತ ಅದ್ಧೂರಿ “ಕರಿ ಹರಿಯುವ ಸ್ಪರ್ಧೆ”ಯನ್ನು ಆಯೋಜಿಸಲಾಗಿತ್ತು. ಗ್ರಾಮೀಣ ಭಾಗದ ರೈತರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದ ಈ ಸ್ಪರ್ಧೆಯು ನೆರೆದಿದ್ದ ನೂರಾರು ಸಾರ್ವಜನಿಕರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ರೈತರು ತಮ್ಮ ಹರಕೆಯ ಮತ್ತು ಹೆಮ್ಮೆಯ ಎತ್ತುಗಳನ್ನು ಸ್ಪರ್ಧೆಗೆ ಸಜ್ಜುಗೊಳಿಸಿದ್ದರು. ಎತ್ತುಗಳ ಕೊಂಬುಗಳಿಗೆ ಆಕರ್ಷಕ ವಿವಿಧ ಬಣ್ಣಗಳನ್ನು ಹಚ್ಚಿ, ಮೈಮೇಲೆ ಬಲೂನ್ಗಳನ್ನು ಕಟ್ಟಿ, ವಿಶಿಷ್ಟವಾಗಿ ಸಿಂಗರಿಸಲಾಗಿತ್ತು. ಹೀಗೆ ವಾದ್ಯಮೇಳಗಳೊಂದಿಗೆ ಶೃಂಗಾರಗೊಂಡು ಬಂದ ದನಕರುಗಳ ಭವ್ಯ ಮೆರವಣಿಗೆಯು ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು.
ಮೂಲ ನಕ್ಷತ್ರವನ್ನು ಆಧರಿಸಿ ಮುಹೂರ್ತ ನಿಶ್ಚಯಿಸಿಕೊಂಡ ರೈತರು, ಇಲ್ಲಿನ ಪ್ರಮುಖ ಅಗಸಿ ಆಂಜನೇಯ ದೇವಸ್ಥಾನದ ರಸ್ತೆಯಲ್ಲಿ ಕರಿ ಹರಿಯುವ ರೋಮಾಂಚನಕಾರಿ ಸ್ಪರ್ಧೆಯನ್ನು ನಡೆಸಿದರು. ಈ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಸುತ್ತಮುತ್ತಲಿನ ಭಾಗದ 10ಕ್ಕೂ ಹೆಚ್ಚು ಜೋಡಿ ಬಲಿಷ್ಠ ಎತ್ತುಗಳು ಭಾಗವಹಿಸಿ, ಧೂಳೆಬ್ಬಿಸುತ್ತಾ ಗುರಿಯತ್ತ ಮುನ್ನುಗ್ಗಿದ ದೃಶ್ಯ ನೆರೆದಿದ್ದವರಲ್ಲಿ ರೋಮಾಂಚನ ಉಂಟುಮಾಡಿತು.
ಸ್ಪರ್ಧೆಯು ಮುಕ್ತಾಯಗೊಂಡ ನಂತರ, ರೈತರು ವಿಜೇತ ಹಾಗೂ ಭಾಗವಹಿಸಿದ ಎತ್ತುಗಳನ್ನು ಭಕ್ತಿಯಿಂದ ಶ್ರೀ ಹಿರೇದೇವತೆ ಹಾಗೂ ಶ್ರೀ ಹನುಮಂತ ದೇವಸ್ಥಾನಗಳಿಗೆ ಕರೆದೊಯ್ದು ವಿಶೇಷ ಪೂಜೆ ಸಲ್ಲಿಸಿದರು. ಇನ್ನು ಇಡೀ ಗ್ರಾಮಸ್ಥರ ಕುತೂಹಲ ಕೆರಳಿಸಿದ್ದ ಈ ಬಾರಿಯ ಕರಿ ಹರಿಯುವ ಸ್ಪರ್ಧೆಯಲ್ಲಿ, ಬಾಲನಗೌಡ ತಂದೆ ಬುಡ್ಡನಗೌಡ ಮೆಣಿಸಿನಗೇರಿ ಇವರ ಜೋಡಿ ಎತ್ತುಗಳು ಅತ್ಯಂತ ವೇಗವಾಗಿ ಓಡಿ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡವು.