
ಮರ್ಚೆಡ್ ಡೇಸ್ ಸುದ್ದಿ.
ಗಂಗಾವತಿ: ನಗರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಮೂಲಸೌಕರ್ಯಗಳ ಕೊರತೆ, ರಸ್ತೆಗಳ ದುಃಸ್ಥಿತಿ ಮತ್ತು ಸಾರ್ವಜನಿಕ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬೇಕೆಂದು ಆಗ್ರಹಿಸಿ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ’ ಯ ಪದಾಧಿಕಾರಿಗಳು ಗಂಗಾವತಿ ನಗರಸಭೆಯ ಮಾನ್ಯ ಪೌರಾಯುಕ್ತರಿಗೆ ಪ್ರಮುಖ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಸಲ್ಲಿಸಿದರು. ನಗರದ ಸಮಗ್ರ ಅಭಿವೃದ್ಧಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ನಗರಸಭೆಯು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು ಎಂದು ಒತ್ತಾಯಿಸಿ ಸಮಿತಿಯ ತಾಲೂಕು ಅಧ್ಯಕ್ಷರಾದ ಜಡೆಯಪ್ಪ ಹಂಚಿನಾಳ ಅವರ ನೇತೃತ್ವದಲ್ಲಿ ಈ ಮನವಿಯನ್ನು ಹಸ್ತಾಂತರಿಸಲಾಯಿತು.
ನಗರದ ಪ್ರಮುಖ ರಸ್ತೆಗಳು ತಗ್ಗು-ಗುಂಡಿಗಳಿಂದ ಬಿದ್ದು ಹಾಳಾಗಿದ್ದು, ಪ್ರತಿನಿತ್ಯ ಸಾವಿರಾರು ಶಾಲಾ ವಾಹನಗಳು, ಆಟೋಗಳು ಹಾಗೂ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಸಾಲದಕ್ಕೆ ವಿವಿಧ ವಾರ್ಡ್‌ಗಳಲ್ಲಿ ಯುಜಿಡಿ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಈ ಜ್ವಲಂತ ಸಮಸ್ಯೆಗಳಿಗೆ ತಕ್ಷಣವೇ ಮುಕ್ತಿ ಹಾಡಬೇಕು ಮತ್ತು ಗಾಂಧಿ ಸರ್ಕಲ್, ಮಹಾವೀರ ಸರ್ಕಲ್ ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ಮಹಿಳೆಯರು ಹಾಗೂ ವೃದ್ಧರ ಅನುಕೂಲಕ್ಕಾಗಿ ತಕ್ಷಣ ಸಾರ್ವಜನಿಕ ಮೂತ್ರಾಲಯಗಳನ್ನು ನಿರ್ಮಿಸಬೇಕು ಎಂದು ಸಮಿತಿ ಪ್ರಮುಖವಾಗಿ ಒತ್ತಾಯಿಸಿದೆ.
ನಗರಸಭೆ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗಗಳನ್ನು (CA ಸೈಟ್) ಗುರುತಿಸಿ, ತಂತಿ ಬೇಲಿ ಹಾಗೂ ಎಚ್ಚರಿಕೆ ಫಲಕಗಳನ್ನು ಹಾಕುವ ಮೂಲಕ ಅತಿಕ್ರಮಣದಿಂದ ರಕ್ಷಿಸಬೇಕೆಂದು ಸಮಿತಿ ಆಗ್ರಹಿಸಿದೆ. ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವ ನಗರಸಭೆಯ ಜಾಗ ಹಾಗೂ ಉದ್ಯಾನವನಗಳನ್ನು ಪತ್ತೆಹಚ್ಚಿ ಕಾನೂನು ನೋಟಿಸ್ ನೀಡಿ ಮುಕ್ತಗೊಳಿಸಬೇಕು. ಅಲ್ಲದೆ, ಫುಟ್‌ಪಾತ್ ಒತ್ತುವರಿ ತೆರವುಗೊಳಿಸುವಾಗ ಕೇವಲ ಬಡ ವ್ಯಾಪಾರಿಗಳನ್ನಷ್ಟೇ ಗುರಿ ಮಾಡದೆ, ನಿಯಮ ಮೀರಿ ಕಟ್ಟಡ ಕಟ್ಟಿಕೊಂಡಿರುವ ಪ್ರಭಾವಿಗಳ ವಿರುದ್ಧವೂ ತಾರತಮ್ಯವಿಲ್ಲದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಪದಾಧಿಕಾರಿಗಳು ಮನವಿಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ನಗರದಲ್ಲಿ ವಿವಿಧ ಇಲಾಖೆಗಳ ಸುಮಾರು 10 ಸರ್ಕಾರಿ ಕಚೇರಿಗಳು, ಹಾಸ್ಟೆಲ್‌ಗಳು ಹಾಗೂ ಅಂಗನವಾಡಿಗಳು ಮೂಲಸೌಕರ್ಯಗಳಿಲ್ಲದ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಇವುಗಳಿಗೆ ನಗರಸಭೆಯ ಖಾಲಿ ಇರುವ ಸರ್ಕಾರಿ ಜಾಗವನ್ನು ನೀಡಿ ಅನುಕೂಲ ಮಾಡಿಕೊಡಬೇಕು ಎಂದು ಸಮಿತಿ ಸಲಹೆ ನೀಡಿದೆ. ನಗರಸಭೆ ಕಾರ್ಯಾಲಯದಲ್ಲಿ ಸಲ್ಲಿಕೆಯಾದ ಈ ಮನವಿಯನ್ನು ಸ್ವೀಕರಿಸಿದ ಅಧಿಕಾರಿಗಳು, ಸಮಸ್ಯೆಗಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಒಂದು ವೇಳೆ ಈ ಎಲ್ಲಾ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಸಮಿತಿ ಎಚ್ಚರಿಸಿದೆ.
ಈ ಸಂದರ್ಭದಲ್ಲಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಬಸವರಾಜ ಮ್ಯಾಗಳಮನಿ, ಜಿಲ್ಲಾಧ್ಯಕ್ಷ ಚಂದ್ರು ನಿಸರ್ಗ, ಪ್ರಮುಖ ಪದಾಧಿಕಾರಿಗಳಾದ ರಾಘವೇಂದ್ರ ಕಡೆಬಾಗಿಲು, ರಾಮಣ್ಣ ರುದ್ರಾಕ್ಷಿ, ಕೆ.ಎಂ. ಅರವಿಂದ ಯೋಗಿ, ಮಂಜುನಾಥ ಚನ್ನದಾಸರ, ಭೋಗೇಶ್ ಆನೆಗುಂದಿ, ಮೇಘರಾಜ, ರಗಡಪ್ಪ ಹೊಸಳ್ಳಿ, ಬಿ.ಕೆ. ಗಣೇಶ, ಮಂಜುನಾಥ ಹಿರೇಮಠ್, ರೆಹಮಾನ್, ಹರೀಶ, ಮೆಹಬೂಬ್, ಹನುಮೇಶ ಹಾಗೂ ಸೋಮಶೇಖರ ಸೇರಿದಂತೆ ಹಲವರು ಉಪಸ್ಥಿತರಿದ್ದರು.