ಮರ್ಚೆಡ್ ಡೇಸ್ ಸುದ್ದಿ.
ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುತ್ತೂರ ಗ್ರಾಮದಲ್ಲಿ ನಿನ್ನೆ ರೈತರು ಮತ್ತು ಹೈ ಟೆನ್ಶನ್ ವಿದ್ಯುತ್ ಕಂಬ ಅಳವಡಿಕೆ ಸಿಬ್ಬಂದಿ ನಡುವೆ ನಡೆದ ಪರಿಹಾರ ವಿಚಾರದ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಬೇವೂರ ಪೊಲೀಸ್ ಠಾಣೆಯ ಪಿಎಸ್ಐ ಗುರುರಾಜ್ ಅವರು ರೈತರ ಶರ್ಟ್ ಹಿಡಿದು ಎಳೆದುಕೊಂಡು ಹೋಗುವ ಮೂಲಕ ಮತ್ತೆ ತಮ್ಮ ಖಾಕಿ ದರ್ಪ ಮೆರೆದಿದ್ದಾರೆ. ಪಿಎಸ್ಐ ಅವರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಯಲಬುರ್ಗಾ ತಾಲೂಕಿನ ಗುತ್ತೂರ ಗ್ರಾಮದ ರೈತರೊಬ್ಬರ 10 ಎಕರೆ ಜಮೀನಿನಲ್ಲಿ ನಾಲ್ಕು ಹೈ ಟೆನ್ಶನ್ ವಿದ್ಯುತ್ ಕಂಬಗಳನ್ನು ಅಳವಡಿಸಲಾಗುತ್ತಿದೆ. ಈ ನಾಲ್ಕು ಕಂಬಗಳಿಗೆ ರೈತರು ₹1 ಕೋಟಿ 20 ಲಕ್ಷ ಪರಿಹಾರ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ, ಕಂಬ ಅಳವಡಿಕೆ ಸಿಬ್ಬಂದಿ ಕೇವಲ ₹40 ಲಕ್ಷ ಮಾತ್ರ ನೀಡುವುದಾಗಿ ಹೇಳಿದ್ದಾರೆ. ಕಂಪನಿಯ ಈ ಧೋರಣೆಗೆ ಒಪ್ಪದ ರೈತರು ನಿನ್ನೆ ಜಮೀನಿನಲ್ಲಿ ಕಾಮಗಾರಿ ತಡೆದು ಪ್ರತಿಭಟಿಸಿದಾಗ ಗಲಾಟೆ ಆರಂಭವಾಗಿದ.
ಸ್ಥಳದಲ್ಲಿ ಗಲಾಟೆ ನಡೆಯುತ್ತಿದ್ದ ಮಾಹಿತಿ ತಿಳಿದು ಬಂದ ಬೇವೂರ ಪಿಎಸ್ಐ ಗುರುರಾಜ್, ರೈತರಿಗೆ ತಿಳಿಹೇಳುವ ಬದಲಾಗಿ ದರ್ಪ ತೋರಿದ್ದಾರೆ. ನ್ಯಾಯ ಕೇಳುತ್ತಿದ್ದ ರೈತರಾದ ಪ್ರಕಾಶ್, ಶ್ರೀಕಾಂತ್ ಹಾಗೂ ವಿಜಯರೆಡ್ಡಿ ಎಂಬ ಮೂವರ ಶರ್ಟ್ ಹಿಡಿದು ಅಮಾನವೀಯವಾಗಿ ಎಳೆದುಕೊಂಡು ಹೋಗಿದ್ದಾರೆ. ಅನ್ನದಾತರ ಮೇಲಿನ ಪೊಲೀಸರ ಈ ದೌರ್ಜನ್ಯದ ದೃಶ್ಯಗಳು ಈಗ ತೀವ್ರ ಚರ್ಚೆಗೆ ಗ್ರಾಸವಾಗಿವೆ.
ಈ ಪಿಎಸ್ಐ: ಈ ಹಿಂದೆಯೂ ಆಗಿದ್ದರು ಸಸ್ಪೆಂಡ್!
ಪಿಎಸ್ಐ ಗುರುರಾಜ್ ಅವರಿಗೆ ವಿವಾದಗಳೇನು ಹೊಸದಲ್ಲ. ಈ ಹಿಂದೆಯೂ ಇವರು ತಮ್ಮ ಕೈಚಳಕ ತೋರಿಸಿದರು.
ಈ ಹಿಂದೆ ವಿಂಡ್ ಫ್ಯಾನ್ ಅಳವಡಿಕೆ ವಿಚಾರವಾಗಿ ರೈತನೊಬ್ಬನ ಮೇಲೆ ಹಲ್ಲೆ ನಡೆಸಿದ ಆರೋಪ ಇವರ ಮೇಲಿದೆ.
ಕುಕನೂರ ಪೊಲೀಸ್ ಠಾಣೆಯಲ್ಲಿದ್ದಾಗ ನ್ಯಾಯ ಕೇಳಲು ಬಂದಿದ್ದ ದಲಿತ ಮುಖಂಡನ ಮೇಲೆ ಹಲ್ಲೆ ನಡೆಸಿದ ಗಂಭೀರ ಆರೋಪದಡಿಯಲ್ಲಿ ಇವರನ್ನು ಅಮಾನತು ಮಾಡಲಾಗಿತ್ತು.
ಕುಕನೂರಿನಿಂದ ಕೆಲವೇ ದಿನಗಳ ಹಿಂದಷ್ಟೇ ಬೇವೂರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಬಂದಿದ್ದ ಗುರುರಾಜ್, ಬುದ್ಧಿ ಕಲಿಯದವರಂತೆ ಮತ್ತೆ ರೈತರ ಮೇಲೆಯೇ ತನ್ನ ದರ್ಪ ಮುಂದುವರಿಸಿದ್ದಾರೆ.
ಸರಣಿ ಅಮಾನತು ಮತ್ತು ವಿವಾದಗಳ ಹಿನ್ನೆಲೆಯುಳ್ಳ ಇಂತಹ ಅಧಿಕಾರಿಯನ್ನು ಸಾರ್ವಜನಿಕರ ರಕ್ಷಣೆಗೆ ನೇಮಿಸಿರುವುದೇ ತಪ್ಪು. ಪದೇ ಪದೇ ರೈತರ ಮೇಲೆ ದರ್ಪ ತೋರುತ್ತಿರುವ ಪಿಎಸ್ಐ ಗುರುರಾಜ್ ವಿರುದ್ಧ ಹಿರಿಯ ಅಧಿಕಾರಿಗಳು ತಕ್ಷಣವೇ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘಟನೆಗಳು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.