ಮರ್ಚೆಡ್ ಡೇಸ್ ಸುದ್ದಿ.
ರಾಯಚೂರು: ಲಿಂಗಸುಗೂರು- ಶಹಾಪುರ- ಹತ್ತಿಗೂಡೂರು ನಡುವಿನ ರಾಷ್ಟ್ರೀಯ ಹೆದ್ದಾರಿ-150ಎ (NH-150A) ಯಲ್ಲಿ ಪದೇ ಪದೆ ಸಂಭವಿಸುತ್ತಿರುವ ಅಪಘಾತಗಳ ತಡೆಗಟ್ಟುವ ನಿಟ್ಟಿನಲ್ಲಿ ರಸ್ತೆಯನ್ನು ತುರ್ತಾಗಿ ಅಗಲೀಕರಣಗೊಳಿಸಬೇಕೆಂದು ಕೋರಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕೆ ಸಲ್ಲಿಸಲಾಗಿದ್ದ ಮನವಿಗೆ ಉತ್ತಮ ಸ್ಪಂದನೆ ದೊರೆತಿದೆ.
ಈ ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಸರಣಿ ಅಪಘಾತಗಳ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ರಸ್ತೆಯನ್ನು ವಿಸ್ತರಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿ. ಉಮಾಶಂಕರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವಾಲಯವು, ಈ ಮಾರ್ಗದ ಅಗಲೀಕರಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಮೂಲಕ ಡಿಪಿಆರ್ (ವಿವೃತ ಯೋಜನಾ ವರದಿ) ಸಿದ್ಧಪಡಿಸುವ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದೆ.
ಈ ಕುರಿತು ಸಂತೋಷ ವ್ಯಕ್ತಪಡಿಸಿರುವ ಸ್ಥಳೀಯರು, “ನಮ್ಮ ಬೇಡಿಕೆಗೆ ತಕ್ಷಣವೇ ಸ್ಪಂದಿಸಿ ಕ್ರಮ ಕೈಗೊಂಡ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿ. ಉಮಾಶಂಕರ್ ಅವರಿಗೆ ಧನ್ಯವಾದಗಳು” ಎಂದು ತಿಳಿಸಿದ್ದಾರೆ.
ಡಿಪಿಆರ್ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಿ, ರಸ್ತೆ ಅಗಲೀಕರಣದ ಕಾಮಗಾರಿಯನ್ನು ಆದಷ್ಟು ಬೇಗ ಪ್ರಾರಂಭಿಸಲಾಗುವುದು ಎಂಬ ಭರವಸೆ ವ್ಯಕ್ತವಾಗಿದೆ. ಈ ಯೋಜನೆಯು ಸಾಕಾರಗೊಂಡರೆ ರಸ್ತೆ ಸುರಕ್ಷತೆ ಹೆಚ್ಚುವುದಲ್ಲದೆ, ಈ ಭಾಗದ ಜನತೆಗೆ ಸಂಚಾರದಲ್ಲಿ ಅಪಾರ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.