ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ.
ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ ಸಾಹಿತ್ಯ ಸಮ್ಮೇಳನಗಳು ಇಂದು ಕೇವಲ ಔಪಚಾರಿಕ ಕಾರ್ಯಕ್ರಮಗಳಾಗಿ ಮಾರ್ಪಡುತ್ತಿವೆಯೇ? ಕಾರಟಗಿಯಲ್ಲಿ ನಡೆಯುತ್ತಿರುವ ಕೊಪ್ಪಳ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ದೃಶ್ಯಾವಳಿಗಳು ಇಂತಹದ್ದೊಂದು ಗಂಭೀರ ಚರ್ಚೆಗೆ ನಾಂದಿ ಹಾಡಿವೆ. ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸುವವರೇ ಪ್ರೇಕ್ಷಕರಾಗಿದ್ದು, ಪ್ರೇಕ್ಷಕರೇ ವಾಚಕರಾಗಿರುವ ವಿಪರ್ಯಾಸ ಕಂಡುಬಂದಿದ್ದು, ಸಾಹಿತ್ಯದ ಬಗೆಗಿನ ಸಾರ್ವಜನಿಕರ ನಿರಾಸಕ್ತಿಗೆ ಕನ್ನಡಿ ಹಿಡಿದಿದೆ.
ಸಮ್ಮೇಳನದ ಉದ್ಘಾಟನೆಯ ಬಳಿಕ ನಡೆದ ವಿವಿಧ ಗೋಷ್ಠಿ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಸಂಘಟಕರು ಹಾಕಿದ್ದ ಬಹುತೇಕ ಕುರ್ಚಿಗಳು ಖಾಲಿಯಾಗಿದ್ದವು. ಕೇವಲ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಜನಸಂದಣಿ ಕಂಡುಬಂದಿದ್ದು, ಸಾಹಿತ್ಯಿಕ ಗೋಷ್ಠಿಗಳಿಗೆ ಜನರ ಕೊರತೆ ಎದ್ದು ಕಾಣುತ್ತಿತ್ತು. ಇಡೀ ಜಿಲ್ಲೆಯ ಸಾಹಿತ್ಯಾಸಕ್ತರು, ಸಂಘಟನೆಗಳು ಹಾಗೂ ಗಣ್ಯರನ್ನು ಒಳಗೊಳ್ಳಬೇಕಿದ್ದ ಈ ಸಮ್ಮೇಳನ ಕೇವಲ ಕಾರಟಗಿ ಮತ್ತು ಕನಕಗಿರಿ ಪಟ್ಟಣಗಳಿಗೆ ಮಾತ್ರ ಸೀಮಿತವಾಯಿತೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಕಳೆದ ಒಂದು ದಶಕದಿಂದ ಸಾಹಿತ್ಯದ ಅಭಿರುಚಿ ಮತ್ತು ಅಭಿವ್ಯಕ್ತಿಯು ಬೇರೆ ಕ್ಷೇತ್ರಗಳಲ್ಲಿ ಚಿಗುರೊಡೆಯುತ್ತಿದ್ದು, ಸಾಂಪ್ರದಾಯಿಕವಾಗಿ ಸಾಹಿತ್ಯ ಓದುವ ಹಾಗೂ ಬರೆಯುವ ಆಸಕ್ತರ ಸಂಖ್ಯೆ ಕ್ಷೀಣಿಸುತ್ತಿದೆ. ಆಧುನಿಕ ಸ್ಪರ್ಶ, ಡಿಜಿಟಲ್ ತಂತ್ರಜ್ಞಾನ, ವ್ಯಾಪಾರೀಕರಣ ಹಾಗೂ ಮನರಂಜನೆಯ ‘ಬಣ್ಣ, ರುಚಿ, ಶಕ್ತಿ’ಗಳ ಅಬ್ಬರದ ನಡುವೆ ಸಾಹಿತ್ಯದ ಬಗೆಗಿನ ಆಸಕ್ತಿ ಕವಲೊಡೆಯುತ್ತಿದೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಕ-ಯುವತಿಯರು ಕೇವಲ ಪರೀಕ್ಷೆ ಮತ್ತು ಉದ್ಯೋಗಕ್ಕೆ ಪೂರಕವಾದ ಸ್ಪರ್ಧಾತ್ಮಕ ಪುಸ್ತಕಗಳನ್ನು ಓದುವುದಕ್ಕೆ ಸೀಮಿತವಾಗಿದ್ದಾರೆ. ಆದರೆ, ಬದುಕಿನ ಮೌಲ್ಯಗಳನ್ನು ಕಟ್ಟಿಕೊಡುವ ಸಾಹಿತ್ಯವನ್ನು ಓದುವ ಮನೋಭಾವನೆಯನ್ನು ಹೊಸ ತಲೆಮಾರಿನಲ್ಲಿ ಬೆಳೆಸಬೇಕಾದ ತುರ್ತು ಅಗತ್ಯವಿದೆ. ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೊಸ ಪೀಳಿಗೆಯು ಹೊಸ ಪ್ರಯೋಗ ಮತ್ತು ಬೆಳವಣಿಗೆಗಳಿಗೆ ಕೈಹಾಕಬೇಕಾಗಿದೆ.
ಸಾಹಿತ್ಯ ಸಮ್ಮೇಳನವೆಂದರೆ ಕೇವಲ ವೇದಿಕೆ ನಿರ್ಮಿಸಿ, ಕವಿಗೋಷ್ಠಿ-ಉಪನ್ಯಾಸಗಳನ್ನು ನಡೆಸುವುದಷ್ಟೇ ಅಲ್ಲ. ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಬರಗಾಲ, ರೈತರ ಸಂಕಷ್ಟ, ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆ ಹಾಗೂ ನವಲಿ ಸಮಾನಾಂತರ ಜಲಾಶಯ ನಿರ್ಮಾಣದಂತಹ ಮಹತ್ವದ ವಿಷಯಗಳ ಕುರಿತು ಚಿಂತನ-ಮಂಥನ ನಡೆಯಬೇಕಿತ್ತು. ಆದರೆ, ಜನಜೀವನದ ನೇರ ಸಮಸ್ಯೆಗಳಿಗೆ ವೇದಿಕೆ ಕಲ್ಪಿಸದಿರುವುದು ಮತ್ತು ಸಂಘಟನೆಯಲ್ಲಿನ ಸಮನ್ವಯದ ಕೊರತೆಯು ಸಮ್ಮೇಳನವನ್ನು ‘ಸಮ್ಮೇಳನಕ್ಕಾಗಿ ಸಮ್ಮೇಳನ’ ಎಂಬಂತಾಗಿಸಿದೆ.
ಮುಂದಿನ ದಿನಗಳಲ್ಲಾದರೂ ಸಾಹಿತ್ಯ ಸಮ್ಮೇಳನಗಳು ಜನಸಾಮಾನ್ಯರನ್ನು ತಲುಪುವಂತಾಗಲು ಮತ್ತು ಹೊಸ ಪೀಳಿಗೆಯನ್ನು ಸಾಹಿತ್ಯದತ್ತ ಸೆಳೆಯಲು ಆಧುನಿಕ ಹಾಗೂ ಜನಪರ ಚಿಂತನೆಗಳೊಂದಿಗೆ ಆಯೋಜನೆಗೊಳ್ಳಬೇಕಿದೆ.