ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.
ಕಲಿಕೆಯು ಕೇವಲ ಪದವಿ, ಉದ್ಯೋಗಕ್ಕೆ ಸೀಮಿತವಾಗಬಾರದು; ಜೀವನದ ಮೌಲ್ಯ, ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಬೇಕು | ಗಂಗಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ
ಗಂಗಾವತಿ: ನಮ್ಮ ವ್ಯಕ್ತಿತ್ವಕ್ಕೆ ಪೂರಕವಾಗಿ ಕಲಿಕೆಯನ್ನು ನಡೆಸಬೇಕು. ಕಲಿಕೆಯ ಮೂಲ ಉದ್ದೇಶವನ್ನು ಸ್ಪಷ್ಟವಾಗಿ ಗುರುತಿಸಿಕೊಂಡು ಮಾನಸಿಕವಾಗಿ ಸಿದ್ಧರಾಗಿ ವಿದ್ಯಾಭ್ಯಾಸ ಮಾಡಬೇಕು. ಮನುಷ್ಯನ ಭೌದ್ಧಿಕ ಸಾಮರ್ಥ್ಯ ಅಪಾರವಾಗಿದ್ದರೂ ಜೀವನವನ್ನು ಅರ್ಥಮಾಡಿಕೊಳ್ಳುವ ದು ಅಷ್ಟು ಸುಲಭವಲ್ಲ ಎಂದು ಕರ್ನಾಟಕ ಪುಸ್ತಕ ಪ್ರಾಧಿಕಾರದ ಸದಸ್ಯರು ಹಾಗೂ ಕೊಪ್ಪಳ ಜಿಲ್ಲೆಯ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷರಾದ ಡಾ. ಶರಣಬಸಪ್ಪ ಕೋಲ್ಕಾರ ಅಭಿಪ್ರಾಯಪಟ್ಟರು.
ನಗರದ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಪ್ರಥಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮತ್ತು ಪಠ್ಯೇತರ ಚಟುವಟಿಕೆಗಳ ವಿವಿಧ ಸಮಿತಿಗಳ ಉದ್ಘಾಟನೆ -2026-27 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನಕ್ಕೆ ನಿರ್ದಿಷ್ಟ ವ್ಯಾಖ್ಯಾನ ನೀಡಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ವಿಭಿನ್ನ ರೀತಿಯಲ್ಲಿ ಬದುಕನ್ನು ನಡೆಸುತ್ತಿದ್ದು, ಜೀವನದ ನೈಜ ಅರ್ಥವನ್ನು ಅರಿತುಕೊಳ್ಳುವುದು ಮುಖ್ಯ. ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಎಲ್ಲರೂ ಜೀವನದಲ್ಲಿ ಯಶಸ್ಸು ಸಾಧಿಸಿದ್ದಾರೆ ಎಂದೇನಿಲ್ಲ. ಆದರೆ ಜೀವನವನ್ನು ಸರಿಯಾಗಿ ಅರ್ಥಮಾಡಿಕೊಂಡು ತಮ್ಮ ಬದುಕನ್ನು ರೂಪಿಸಿಕೊಂಡ ಅನೇಕ ಮಹನೀಯರು ನಮ್ಮ ಮುಂದಿದ್ದಾರೆ. ಇಂತಹ ಗೊಂದಲಗಳ ನಡುವೆ ನಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸಿಕೊಳ್ಳಬೇಕು ಎಂದು ಹೇಳುತ್ತಾ
ಬದುಕಿನಲ್ಲಿ ಸಕಾರಾತ್ಮಕ ಮನೋಭಾವ ಬೆಳೆಸಿಕೊಂಡಾಗ ಎಲ್ಲವನ್ನೂ ಸಾಧಿಸಲು ಸಾಧ್ಯ. ಇದಕ್ಕೆ ಯಶಸ್ವಿ ಜೀವನ ನಡೆಸಿದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕು ನಮಗೆ ಉತ್ತಮ ಮಾದರಿಯಾಗಿದೆ. ಸಮಾಜದಲ್ಲಿ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದರ ಜೊತೆಗೆ ಭೌದ್ಧಿಕ ಮತ್ತು ಭೌತಿಕ ಬೆಳವಣಿಗೆಗೂ ಆದ್ಯತೆ ನೀಡಬೇಕು. ಸಮಸ್ಯೆಗಳು ಎದುರಾದಾಗ ಅವುಗಳಿಗೆ ಪರಿಹಾರವೂ ಇದ್ದೇ ಇರುತ್ತದೆ. ಆದ್ದರಿಂದ ಪರಿಪೂರ್ಣ ಜೀವನಕ್ಕಾಗಿ ಬದುಕಿನ ಬಗ್ಗೆ ನಿರಂತರವಾಗಿ ಚಿಂತನೆ ನಡೆಸಬೇಕು. ವಿದ್ಯಾರ್ಥಿ ಜೀವನವು ಸುವರ್ಣಾವಕಾಶವಾಗಿದ್ದು, ಅದನ್ನು ಸದುಪಯೋಗಪಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮುಮ್ತಾಜ್ ಬೇಗಂ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚಿನ ಗಮನವನ್ನು ಓದಿನ ಕಡೆಗೆ ಹರಿಸಬೇಕು. ಕಾಲೇಜಿನಲ್ಲಿ ಪಡೆದುಕೊಂಡ ಜ್ಞಾನ ಮತ್ತು ಅನುಭವಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಿದಾಗ ವಿದ್ಯಾರ್ಥಿಗಳಲ್ಲಿ ಸಾಧಿಸುವ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸ ಬೆಳೆಯುತ್ತದೆ ಎಂದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಕೃಷ್ಣ ಜೆ. ಮಾತನಾಡಿ, ವಿದ್ಯಾರ್ಥಿಗಳು ಉತ್ತಮವಾಗಿ ಅಧ್ಯಯನ ಮಾಡಿ ತಮ್ಮ ಬದುಕನ್ನು ರೂಪಿಸಿಕೊಳ್ಳುವುದರ ಜೊತೆಗೆ ಮಹಾವಿದ್ಯಾಲಯದ ಘನತೆ ಮತ್ತು ಗೌರವವನ್ನು ಕಾಪಾಡಬೇಕು. ಕಾಲೇಜಿನಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆಯಾದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಇಬ್ರಾಹಿಂ ಎಂ.ಕೆ. ಮಾತನಾಡಿ, ಶಿಕ್ಷಣವೆಂದರೆ ಕೇವಲ ಉದ್ಯೋಗ ಪಡೆಯುವುದಷ್ಟೇ ಅಲ್ಲ; ಲೌಕಿಕ ಜ್ಞಾನ ಮತ್ತು ಜೀವನ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದೂ ಆಗಿದೆ. ಆದ್ದರಿಂದ ಶಿಕ್ಷಣದ ಜೊತೆಗೆ ಅಗತ್ಯ ಕೌಶಲ್ಯಗಳನ್ನೂ ಕಲಿಯಬೇಕು ಎಂದು ತಿಳಿಸಿದರು.
ಶೈಕ್ಷಣಿಕ ಸಂಯೋಜಕರಾದ ದೊಡ್ಡ ಬಸಮ್ಮ, ಅತಿಥಿ ಉಪನ್ಯಾಸಕರಾದ ಬಾಳಪ್ಪ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಶಿವರಾಜ ಗುರಿಕಾರ ಅವರು ಮಾತನಾಡುತ್ತ ವಿದ್ಯಾರ್ಥಿಗಳು ಸಾಮಾಜಿಕ ಜೀವನದಲ್ಲಿ ಆದರ್ಶ ವ್ಯಕ್ತಿಗಳ ವ್ಯಕ್ತಿತ್ವ ಪಾಲಿಸಿ ಅಳವಡಿಸಿಕೊಳ್ಳಬೇಕು. ಹಿರಿಯ ವಿದ್ಯಾರ್ಥಿಗಳ ಸಾಧನೆ ನೋಡಿ ನೀವು ಕೂಡ ಅ ರೀತಿ ಸಾಧನೆ ಮಾಡಿ. ನಮ್ಮಲ್ಲಿರುವ ತಪ್ಪುಗಳನ್ನು ತಿದ್ದುಕೊಂಡು ಅಧ್ಯಯನದಲ್ಲಿ ತಲ್ಲಿನರಾಗಿ ಉನ್ನತ ಮಟ್ಟಕ್ಕೆ ಹೋಗಬೇಕು. ಪೂರ್ಣ ಪ್ರಮಾಣದಲ್ಲಿ ಪಾಠ ಮತ್ತು ಪ್ರವಚನ ಕೇಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಉಮಾಕಾಂತ ಅವರೆಡ್ಡಿ, ಡಾ. ಶಿಲ್ಪಾ ಕುಲಕರ್ಣಿ, ಡಾ. ಅಣ್ಣೋಜಿ ರೆಡ್ಡಿ, ಡಾ. ಅನಿಲ ಕುಮಾರ ಎಡವರ್ಡ್, ಡಾ. ಶೋಭಾ ಕೆ.ಎಸ್. ಹವಾಲ್ದಾರ್ ಮಹೇಂದರ್ ಸಿಂಗ್, ಮಂಜುನಾಥ್ ಕೆ. ಎಚ್, ರವಿ, ಬಾರೀಕೆರ ಫಣಿರಾಜ, ಡಾ. ಅನ್ನಪೂರ್ಣ ಗುಡದೂರ, ರವಿಕುಮಾರ, ಕೆ, ಡಾ. ಎ. ದೊರೆಬಾಬು, ಡಾ. ನರಸಿಂಹ, ಅನಿಲ ಕುಮಾರ, ಡಾ. ಎ. ಮಹೇಶ್, ಆಶ್ರಫ್ ಅಳ್ಳಲ್ಲಿ, ಅಕ್ಕಿ ಮಾರುತಿ, ಮೆಹತಾಬ್ ಅಂಜುಮ್, ಸಲೀಮ್, ಭೂಮಿಕಾ ಎ, ಮಲ್ಲಿಕಾರ್ಜುನ ಡಿ, ಡಾ. ಅಶೋಕ ಕೆ, ರಾಘಮ್ಮ, ಪ್ರತಿಭಾ ಮುದ್ಗಲ್, ಜ್ಯೋತಿ, ಡಾ. ಗುಂಡೂರು ಪವನ್ ಕುಮಾರ, ಡಾ. ಬಸವರಾಜ ಗೌಡನಬಾವಿ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ವಿವಿಧ ಸಮಿತಿಗಳ ಸಂಚಾಲಕರು, ಶೈಕ್ಷಣಿಕ ಸಂಯೋಜಕರು, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಎನ್.ಸಿ.ಸಿ ಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ಪಠ್ಯತರ ಚಟುವಟಿಕೆಗಳಲ್ಲಿ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತುಳಸಿ ಪ್ರಾರ್ಥಿಸಿದರು. ಡಾ. ಪವನ ಕುಮಾರ ಗುಂಡೂರು ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಡಾ. ಉಮಾಕಾಂತ ಅವರೆಡ್ಡಿ ಮತ್ತು ಡಾ. ನರಸಿಂಹ ಸ್ವಾಗತಿಸಿದರು. ಉಪನ್ಯಾಸಕ ಡಾ. ಮಣಿಕಂಠ ಹಂಗಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.