
ಮರ್ಚೆಡ್ ಡೇಸ್ ಸುದ್ದಿ|ವಿಜಯನಗರ (ಹೊಸಪೇಟೆ)
ಹೊಸಪೇಟೆ: ಕರ್ನಾಟಕ ರಕ್ಷಣಾ ವೇದಿಕೆ ಯುವಶಕ್ತಿ ಸಂಘಟನೆಯ ವತಿಯಿಂದ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಡಗರ, ಸಂಭ್ರಮ ಹಾಗೂ ಜನಪರ ಸೇವೆಯೊಂದಿಗೆ ಆಚರಿಸಲಾಯಿತು. ಕರವೇ ಯುವಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಆರ್. ವಿಜಯ್ ಕುಮಾರ್ ಹಾಗೂ ವಿಜಯನಗರ ಜಿಲ್ಲಾಧ್ಯಕ್ಷರಾದ ಪಿ. ಭಾಸ್ಕರ್ ನಾಯಕ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಾಡದೇವಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಲಾಯಿತು.
ರಾಜ್ಯೋತ್ಸವದ ಅಂಗವಾಗಿ ಹೊಸಪೇಟೆಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು-ಹಂಪಲು ಹಾಗೂ ಪೌಷ್ಟಿಕ ಆಹಾರವನ್ನು ವಿತರಿಸಲಾಯಿತು. ಆಸ್ಪತ್ರೆಯ ವಾರ್ಡ್ಗಳಿಗೆ ತೆರಳಿದ ಮುಖಂಡರು ರೋಗಿಗಳ ಯೋಗಕ್ಷೇಮ ವಿಚಾರಿಸಿ, ಎಲ್ಲರೂ ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದರು. ನೊಂದವರ ಕಣ್ಣೀರೊರೆಸುವ ಮೂಲಕ ನಾಡಹಬ್ಬವನ್ನು ಆಚರಿಸಿದ ಈ ಕಾರ್ಯವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಈ ವೇಳೆ ಜಂಟಿಯಾಗಿ ಮಾತನಾಡಿದ ರಾಜ್ಯಾಧ್ಯಕ್ಷ ಆರ್. ವಿಜಯ್ ಕುಮಾರ್ ಹಾಗೂ ಜಿಲ್ಲಾಧ್ಯಕ್ಷ ಪಿ. ಭಾಸ್ಕರ್ ನಾಯಕ್, “ಕನ್ನಡ ನಾಡು, ನುಡಿ, ನೆಲ ಮತ್ತು ಜಲದ ಸಂರಕ್ಷಣೆಗಾಗಿ ಕರವೇ ಯುವಶಕ್ತಿ ಸಂಘಟನೆಯು ನಿರಂತರವಾಗಿ ಶ್ರಮಿಸುತ್ತಿದೆ. ಕನ್ನಡಿಗರ ಹಕ್ಕುಗಳಿಗೆ ಹಾಗೂ ತಾಯ್ನಾಡಿನ ಗೌರವಕ್ಕೆ ಧಕ್ಕೆ ಬಂದಾಗ ನಮ್ಮ ಸಂಘಟನೆ ಬೀದಿಗಿಳಿದು ರಾಜಿರಹಿತ ಹೋರಾಟ ನಡೆಸಲು ಸದಾ ಸಿದ್ಧವಿದೆ,” ಎಂದು ಗುಡುಗಿದರು.
ಈ ಸಂದರ್ಭದಲ್ಲಿ ಹೊಸಪೇಟೆ ಹಾಗೂ ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕುಗಳ ಕರವೇ ಯುವಶಕ್ತಿ ಸಂಘಟನೆಯ ಪದಾಧಿಕಾರಿಗಳು, ಪ್ರಮುಖ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಭಾಗವಹಿಸಿ ರಾಜ್ಯೋತ್ಸವದ ಜಯಘೋಷ ಮೊಳಗಿಸಿ ಇದೇ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ಶುಭಾಶಯಗಳು ತಿಳಿಸಿದರು.