
ಮರ್ಚೆಡ್ ಡೇಸ್ ಸುದ್ದಿ|ಸಿರುಗುಪ್ಪ.
ಸಿರುಗುಪ್ಪ:ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬಸರಹಳ್ಳಿ ಗ್ರಾಮದಲ್ಲಿ ಶರನ್ನವರಾತ್ರಿ ಅಂಗವಾಗಿ ಆಯೋಜಿಸಲಾಗಿದ್ದ ಶ್ರೀ ದೇವಿ ಪುರಾಣ ಮಹಾಮಂಗಳ ಕಾರ್ಯಕ್ರಮವು ಅತ್ಯಂತ ಸಡಗರ-ಸಂಭ್ರಮ ಹಾಗೂ ಭಕ್ತಿಭಾವದಿಂದ ಯಶಸ್ವಿಯಾಗಿ ಸಂಪನ್ನಗೊಂಡಿತು.
ದಿನಾಂಕ 11-10-2026 ರಿಂದ 22-10-2026 ರವರೆಗೆ ನಡೆದ ಈ ಧಾರ್ಮಿಕ ಮಹೋತ್ಸವದಲ್ಲಿ ಪ್ರತಿದಿನ ಸಾಯಂಕಾಲ 7:00 ರಿಂದ ರಾತ್ರಿ 9:30 ರವರೆಗೆ ಶ್ರೀ ದೊಡ್ಡಯ್ಯ ಸ್ವಾಮಿಗಳವರು ಶ್ರೀದೇವಿ ಚರಿತ್ರೆಯ ಆಧ್ಯಾತ್ಮಿಕ ವಿಚಾರಗಳನ್ನೊಳಗೊಂಡ ಪುರಾಣ ಪಠಣ ಮಾಡಿದರು. ಪುರಾಣದ ಗೂಢ ತತ್ವ ಹಾಗೂ ಅರ್ಥವನ್ನು ಪೂಜ್ಯ ಶ್ರೀ ಪಂಚಾಕ್ಷರಯ್ಯ ಹಿರೇಮಠ್ ಅವರು ಭಕ್ತರಿಗೆ ಅರ್ಥವಾಗುವಂತೆ ಬಿಡಿಬಿಡಿಯಾಗಿ ಪ್ರವಚನ ನೀಡಿದರು.
ಉತ್ಸವದ ಅಂಗವಾಗಿ ನಿತ್ಯ ಮುಂಜಾನೆ ವಿಶೇಷ ಎಲೆ ಪೂಜೆ, ಮಹಾಮಂಗಳಾರತಿ ಹಾಗೂ ಮಧ್ಯಾಹ್ನ ಸಮಸ್ತ ಗ್ರಾಮಸ್ಥರಿಗೆ ಅನ್ನಸಂತರ್ಪಣೆ (ಮಹಾಪ್ರಸಾದ) ವ್ಯವಸ್ಥೆ ಮಾಡಲಾಗಿತ್ತು. ಶರನ್ನವರಾತ್ರಿಯ ಕೊನೆಯ ದಿನದಂದು ಸಾಂಪ್ರದಾಯಿಕವಾಗಿ ಬನ್ನಿ ಮುಡಿಯುವ (ಬನ್ನಿ ಹಂಚುವ) ಆಚರಣೆಯೊಂದಿಗೆ ವಿಜಯದಶಮಿ ಹಾಗೂ ದಸರಾ ಉತ್ಸವಕ್ಕೆ ಭಕ್ತಿಪೂರ್ವಕ ತೆರೆ ಎಳೆಯಲಾಯಿತು.