Home ಸುದ್ದಿ ​ಕೋಟಿ ವೆಚ್ಚದ ವೈಭವ, ಸೇವೆ ನೀಡದೆ ಬಿಕೋ ಎನ್ನುತ್ತಿದೆ ಸ್ವಾಮಿಹಳ್ಳಿ ಸರ್ಕಾರಿ ದವಾಖಾನೆ.
ಸುದ್ದಿ

​ಕೋಟಿ ವೆಚ್ಚದ ವೈಭವ, ಸೇವೆ ನೀಡದೆ ಬಿಕೋ ಎನ್ನುತ್ತಿದೆ ಸ್ವಾಮಿಹಳ್ಳಿ ಸರ್ಕಾರಿ ದವಾಖಾನೆ.

Share
Share

ಮರ್ಚೆಡ್ ಡೇಸ್ ಸುದ್ದಿ|ಸ್ವಾಮಿ ಹಳ್ಳಿ.

ಸಂಡೂರು: ಗ್ರಾಮೀಣ ಜನತೆಗೆ ಗುಣಮಟ್ಟದ ಚಿಕಿತ್ಸೆ ಒದಗಿಸುವ ಆಶಯದೊಂದಿಗೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಪ್ರಾಥಮಿಕ ಆರೋಗ್ಯ ಕೇಂದ್ರವೊಂದು (ಪಿಎಚ್‌ಸಿ) ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ತುತ್ತಾಗಿ ಪಾಳುಬಿದ್ದಿದೆ. ಸಂಡೂರು ತಾಲೂಕಿನ ಗಣಿ ಬಾಧಿತ ಸ್ವಾಮಿಹಳ್ಳಿ ಗ್ರಾಮದ ಹೊರವಲಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನದ (ಡಿಎಂಎಫ್) 2020-21ನೇ ಸಾಲಿನ ಅನುದಾನದಲ್ಲಿ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿತಿ ಕೇಂದ್ರದ ಮೂಲಕ ಈ ಆಸ್ಪತ್ರೆ ಕಟ್ಟಡ ನಿರ್ಮಿಸಲಾಗಿತ್ತು. ಆದರೆ ಕಾಮಗಾರಿ ಮುಗಿದು ಐದಾರು ವರ್ಷಗಳು ಗತಿಸಿದರೂ, ಕಾಯಂ ವೈದ್ಯರು, ಸಿಬ್ಬಂದಿ ಹಾಗೂ ಅಗತ್ಯ ಸೌಲಭ್ಯಗಳಿಲ್ಲದೆ ಕಟ್ಟಡ ಧೂಳು ಹಿಡಿಯುತ್ತಿದ್ದು, ಸಾರ್ವಜನಿಕರ ತೆರಿಗೆ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಆಸ್ಪತ್ರೆಗೆ ತೆರಳಲು ಸೂಕ್ತ ರಸ್ತೆ ಸಂಪರ್ಕವಿಲ್ಲದೆ, ಕಟ್ಟಿಗೆ ಕಂಬಗಳ ಮೂಲಕ ತಾತ್ಕಾಲಿಕ ವಿದ್ಯುತ್ ಹಾಗೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದೆ ಇಡೀ ಆವರಣ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಕಟ್ಟಡ ಕಾಮಗಾರಿ ಮುಗಿದಿದ್ದರೂ ಅಧಿಕೃತ ಉದ್ಘಾಟನೆ ಕಾಣುವ ಮುನ್ನವೇ ಪ್ರಯೋಗಾಲಯದ ಕೊಠಡಿ ಸೇರಿ ಹಲವೆಡೆ ಗೋಡೆಗಳಲ್ಲಿ ಬಿರುಕುಗಳು ಮೂಡಿದ್ದು, ಕಿಟಕಿ ಗಾಜುಗಳು ಒಡೆದು, ಸುತ್ತಲೂ ಮುಳ್ಳುಕಂಟಿಗಳು ಬೆಳೆದು ನಿಂತಿವೆ. ಕಟ್ಟಡ ನಿರ್ಮಾಣಕ್ಕೆ ತೋರಿಸಿದ ಉತ್ಸಾಹವನ್ನು ಆಸ್ಪತ್ರೆಯನ್ನು ಕಾರ್ಯಾರಂಭಗೊಳಿಸುವಲ್ಲಿ ಅಧಿಕಾರಿಗಳು ತೋರದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಸ್ತುತ ಗ್ರಾಮಸ್ಥರ ತೀವ್ರ ಒತ್ತಾಯದ ಮೇರೆಗೆ ಎನ್‌ಎಂಡಿಸಿ ಸಂಸ್ಥೆಯ ಸಂಚಾರಿ ಆರೋಗ್ಯ ಘಟಕದ ಒಬ್ಬ ವೈದ್ಯರು ಮತ್ತು ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ನಿಯೋಜಿಸಲಾಗಿದ್ದು, ಹಗಲಿನ ವೇಳೆಯಲ್ಲಿ ಮಾತ್ರ ಅಲ್ಪಸ್ವಲ್ಪ ಚಿಕಿತ್ಸೆ ದೊರೆಯುತ್ತಿದೆ. ಸುತ್ತಮುತ್ತ ನಿರಂತರ ಗಣಿಗಾರಿಕೆ ನಡೆಯುತ್ತಿರುವುದರಿಂದ ಕೆಂಪು ಮಣ್ಣಿನ ಧೂಳಿನಿಂದ ಗ್ರಾಮಸ್ಥರು ಉಸಿರಾಟ ಹಾಗೂ ಇತರೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತುರ್ತು ಚಿಕಿತ್ಸೆಯಿಲ್ಲದೆ ಗರ್ಭಿಣಿಯರು, ವೃದ್ಧರು ಹಾಗೂ ಬಡ ರೋಗಿಗಳು ಸಣ್ಣಪುಟ್ಟ ಕಾಯಿಲೆಗಳಿಗೂ ದೂರದ ಪಟ್ಟಣಗಳಿಗೆ ಅಲೆಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಾಣ ನಿದ್ದೆಯಿಂದ ಎದ್ದು, ಕಟ್ಟಡದ ಗುಣಮಟ್ಟ ಪರಿಶೀಲಿಸಿ ದುರಸ್ತಿಪಡಿಸುವುದರೊಂದಿಗೆ ರಸ್ತೆ, ನೀರು, ವಿದ್ಯುತ್ ಕಲ್ಪಿಸಿ ಕಾಯಂ ವೈದ್ಯರನ್ನು ನೇಮಿಸಿ 24 ಗಂಟೆಯೂ ಸೇವೆ ನೀಡುವಂತೆ ಮಾಡಬೇಕೆಂದು ಸಾರ್ವಜನಿಕರು ಬಲವಾಗಿ ಆಗ್ರಹಿಸಿದ್ದಾರೆ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...