ಮರ್ಚೆಡ್ ಡೇಸ್ ಸುದ್ದಿ|ರಾಯಚೂರು.
ರಾಯಚೂರು:ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ, ತಲೆಮಾರುಗಳಿಂದ ಭಿಕ್ಷಾಟನೆಯನ್ನೇ ನಂಬಿ ಬದುಕುತ್ತಿರುವ ಸಿಂಧೋಳ್ಳು ಸಮುದಾಯದ ಜನರು ಶಾಶ್ವತ ವಸತಿ ಕಲ್ಪಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಳೆದ 50 ವರ್ಷಗಳಿಂದ ಸೂಕ್ತ ನೆಲೆ ಮತ್ತು ಸೂರು ಇಲ್ಲದೆ ಅತಂತ್ರ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ತಮ್ಮ ಅಳಲು ತೋಡಿಕೊಂಡರು. ವಸತಿ ಸೌಕರ್ಯವಿಲ್ಲದ ಕಾರಣ ಮಕ್ಕಳು ಹಾಗೂ ಯುವಕರು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಭಿಕ್ಷಾಟನೆಯೇ ಅನಿವಾರ್ಯ ವೃತ್ತಿಯಾಗುತ್ತಿದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ, ಯುವಜನತೆಗೆ ಉತ್ತಮ ಭವಿಷ್ಯ ರೂಪಿಸಲು ಶಾಶ್ವತ ನೆಲೆ ಅತಿಮುಖ್ಯವಾಗಿದೆ ಎಂದು ಸಮುದಾಯದ ಮುಖಂಡರು ಒತ್ತಾಯಿಸಿದರು. ಸರ್ಕಾರ ಕೂಡಲೇ ಎಚ್ಚೆತ್ತು ನಿವೇಶನ ಮತ್ತು ವಸತಿ ಒದಗಿಸಿ, ತಮ್ಮನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಅವರು ಮನವಿ ಸಲ್ಲಿಸಿದರು.