Home ಸುದ್ದಿ ಗಂಗಾವತಿಯಲ್ಲಿ ಯುವ ಸಂಸತ್ ಪೂರ್ವ ತರಬೇತಿ ರದ್ದು: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳು, ಪಾಲಕರ ಆಕ್ರೋಶ!
ಸುದ್ದಿ

ಗಂಗಾವತಿಯಲ್ಲಿ ಯುವ ಸಂಸತ್ ಪೂರ್ವ ತರಬೇತಿ ರದ್ದು: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳು, ಪಾಲಕರ ಆಕ್ರೋಶ!

Share
Share
ಮರ್ಚೆಡ್ ಡೇಸ್ ಸುದ್ದಿ: ಗಂಗಾವತಿ.

ಗಂಗಾವತಿ: ತಾಲೂಕು ಮಟ್ಟದ ‘ಯುವ ಸಂಸತ್ ಸ್ಪರ್ಧೆ–2026’ರ ಅಂಗವಾಗಿ ಅ.5ರಂದು ನಿಗದಿಯಾಗಿದ್ದ ಪೂರ್ವಭಾವಿ ಪ್ರಾಯೋಗಿಕ ತರಬೇತಿ ಕೊನೆಯ ಕ್ಷಣದಲ್ಲಿ ರದ್ದಾದ ಘಟನೆಗೆ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿಬಂದಿದೆ. ಅ.9ರಂದು ನಡೆಯಲಿರುವ ಮುಖ್ಯ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಉದ್ದೇಶದಿಂದ ಸೋಮವಾರ ಮಧ್ಯಾಹ್ನ 3.30ಕ್ಕೆ ನಗರದ ಮಂಥನ ಸಭಾಂಗಣದಲ್ಲಿ ತರಬೇತಿ ಆಯೋಜಿಸಲಾಗಿತ್ತು. ಆದರೆ, ತರಬೇತುದಾರರೇ ಆಗಮಿಸದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದುಗೊಂಡಿದ್ದು, ದೂರದ ಊರುಗಳಿಂದ ಆಗಮಿಸಿದ್ದ ಪ್ರೌಢಶಾಲೆ, ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳು ಗಂಟೆಗಟ್ಟಲೆ ಕಾದು ನಿರಾಶೆಯಿಂದ ವಾಪಸ್ ತೆರಳುವಂತಾಯಿತು.

ವಿದ್ಯಾರ್ಥಿಗಳು ಕಡ್ಡಾಯವಾಗಿ ತರಬೇತಿಗೆ ಹಾಜರಾಗುವಂತೆ ಪ್ರಾಚಾರ್ಯರು ಹಾಗೂ ಶಿಕ್ಷಕರಿಗೆ ವಾಟ್ಸಾಪ್ ಗ್ರೂಪ್‌ಗಳ ಮೂಲಕ ಸೂಚನೆ ನೀಡಲಾಗಿತ್ತು. ಅಧಿಕಾರಿಗಳ ಸೂಚನೆಯನ್ನು ನಂಬಿ ಗ್ರಾಮೀಣ ಭಾಗಗಳಿಂದ ವಿದ್ಯಾರ್ಥಿಗಳು ಉತ್ಸಾಹದಿಂದ ಗಂಗಾವತಿಗೆ ಆಗಮಿಸಿದ್ದರು. ವಡ್ಡರಹಟ್ಟಿ ಪ್ರೌಢಶಾಲೆಯ ವಿದ್ಯಾರ್ಥಿನಿಯೊಬ್ಬರು ಗದ್ವಾಲ್ ಕ್ಯಾಂಪ್‌ನಿಂದ ತಂದೆಯೊಂದಿಗೆ ಬೆಳಗ್ಗೆಯೇ ಗಂಗಾವತಿಗೆ ಬಂದಿದ್ದರು. ಮಗಳು ಯುವ ಸಂಸತ್ ಕಲಾಪದ ಮಾದರಿಯನ್ನು ಕಲಿತುಕೊಳ್ಳಲಿ ಎಂಬ ಆಸೆಯಿಂದ ತಂದೆಯೂ ಆಕೆಯೊಂದಿಗೆ ಕಾದಿದ್ದರು. ಆದರೆ, ನಿಗದಿತ ಸಮಯ ಕಳೆದರೂ ತರಬೇತಿ ಆರಂಭವಾಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರು ಅಸಮಾಧಾನಗೊಂಡರು.

ಗಂಟೆಗಟ್ಟಲೆ ಕಾಯಿಸಿದ ಬಳಿಕ ಸ್ಥಳಕ್ಕೆ ಬಂದ ಅಧಿಕಾರಿಗಳು, “ತರಬೇತುದಾರರು ಬಂದಿಲ್ಲ. ಹೀಗಾಗಿ ಇಂದಿನ ತರಬೇತಿ ರದ್ದುಪಡಿಸಲಾಗಿದ್ದು, ಅ.7ಕ್ಕೆ ಮುಂದೂಡಲಾಗಿದೆ” ಎಂದು ತಿಳಿಸಿದರು. ತರಬೇತಿ ರದ್ದಾಗುವ ಮಾಹಿತಿ ಮೊದಲೇ ನೀಡದಿರುವುದು ಹಾಗೂ ವಿದ್ಯಾರ್ಥಿಗಳು ಸ್ಥಳಕ್ಕೆ ಬಂದ ಬಳಿಕವಷ್ಟೇ ಕಾರಣ ತಿಳಿಸಿರುವುದು ಅಧಿಕಾರಿಗಳ ಪೂರ್ವಸಿದ್ಧತೆಯ ಕೊರತೆಯನ್ನು ಎತ್ತಿ ತೋರಿಸಿದೆ. ಸರ್ಕಾರದ ಮಹತ್ವಾಕಾಂಕ್ಷೆಯ ಯುವ ಸಂಸತ್ ಕಾರ್ಯಕ್ರಮದಂತಹ ವಿದ್ಯಾರ್ಥಿಗಳ ನಾಯಕತ್ವ ಹಾಗೂ ಪ್ರಜಾಪ್ರಭುತ್ವದ ಅರಿವು ಬೆಳೆಸುವ ವೇದಿಕೆಯನ್ನು ಅಧಿಕಾರಿಗಳು ಇಷ್ಟು ಹಗುರವಾಗಿ ನಿರ್ವಹಿಸಿರುವುದು ಬೇಸರದ ಸಂಗತಿ ಎಂದು ಶಿಕ್ಷಕರು ಹಾಗೂ ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.

ಯುವಜನರಲ್ಲಿ ಸಂಸದೀಯ ವ್ಯವಸ್ಥೆ, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶ ಹೊಂದಿರುವ ಯುವ ಸಂಸತ್ ಸ್ಪರ್ಧೆಗೆ ಅಗತ್ಯ ಪೂರ್ವತಯಾರಿ ನೀಡುವುದು ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿಯಾಗಿದೆ. ಆದರೆ, ತರಬೇತುದಾರರ ಹಾಜರಾತಿಯನ್ನೇ ಖಚಿತಪಡಿಸಿಕೊಳ್ಳದೆ ಕಾರ್ಯಕ್ರಮ ಆಯೋಜಿಸಿರುವುದು ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಮೂಡಿಸಿದೆ. ವಿದ್ಯಾರ್ಥಿಗಳ ಸಮಯ, ಪ್ರಯಾಣದ ಕಷ್ಟ ಹಾಗೂ ಪಾಲಕರ ನಿರೀಕ್ಷೆಗೆ ಯಾವುದೇ ಮೌಲ್ಯ ನೀಡದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಅ.7ರಂದು ನಡೆಯಲಿರುವ ಮುಂದೂಡಿದ ತರಬೇತಿ ಹಾಗೂ ಅ.9ರಂದು ನಡೆಯಲಿರುವ ಮುಖ್ಯ ಸ್ಪರ್ಧೆಯಲ್ಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ  ತರಬೇತುದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಹಾಜರಾತಿಯನ್ನು ಮುಂಚಿತವಾಗಿ ಖಚಿತಪಡಿಸಿಕೊಳ್ಳಬೇಕು. ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕಾದ ಕಾರ್ಯಕ್ರಮವೇ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳ ನಿರಾಸೆಗೆ ಕಾರಣವಾಗದಂತೆ, ಮುಂದಿನ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Share
Related Articles
ಸುದ್ದಿ

ಶಿಕ್ಷಣವು ಜೀವನದ ಪರಿಪೂರ್ಣ ಮೌಲ್ಯಗಳನ್ನು ರೂಪಿಸುವ ಸಾಧನ: ಡಾ. ಇಬ್ರಾಹಿಂ ಎಂ.ಕೆ.

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಎಸ್.ಕೆ.ಎನ್.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಭಾಗದ ಪ್ರಥಮ ವರ್ಷದ...

ಸುದ್ದಿ

ಅರ್ಥಶಾಸ್ತ್ರ ವಿದ್ಯಾರ್ಥಿಗಳಿಗೆ ವರದಾನ: ಡಾ. ಕೊಂತಮ್ ಸತೀಶ್ ಅವರಿಂದ ‘ಡೆವಲಪ್‌ಮೆಂಟ್ ಎಕನಾಮಿಕ್ಸ್’ ಕೃತಿ ರಚನೆ.

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಉಪನ್ಯಾಸಕರು, ಸಂಶೋಧಕರು ಹಾಗೂ ಲೇಖಕರಾದ ಡಾ. ಸತೀಶ್ ಅವರ ಶೈಕ್ಷಣಿಕ ಕೊಡುಗೆಗೆ...

ಸುದ್ದಿ

*ಗಂಗಾವತಿ ತಹಶೀಲ್ದಾರ್ ಕಚೇರಿಯಲ್ಲಿ ಇನ್‌ವರ್ಡ್ ವ್ಯವಸ್ಥೆ ಇಲ್ಲ: ಉನ್ನತ ಮಟ್ಟದ ತನಿಖೆಗೆ ಒತ್ತಾಯ – ಜೋಗಿನ್ ರಮೇಶ್ ನಾಯಕ್*

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ಗಂಗಾವತಿ:* ಗಂಗಾವತಿ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಂದ ಸ್ವೀಕರಿಸುವ ಅರ್ಜಿಗಳಿಗೆ ಸಮರ್ಪಕ...