
ಮರ್ಚೆಡ್ ಡೇಸ್ ಸುದ್ದಿ|ಮಸ್ಕಿ.
ಮಸ್ಕಿ: ಶಿಕ್ಷಣ ಕ್ಷೇತ್ರಕ್ಕೆ ನೀಡಿದ ನಿಸ್ವಾರ್ಥ ಸೇವೆ ಹಾಗೂ ಶೈಕ್ಷಣಿಕ ಕಾಳಜಿಯನ್ನು ಗುರುತಿಸಿ, ರಾಯಚೂರು ಜಿಲ್ಲಾ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ (ರಿ.) ಮಸ್ಕಿ ತಾಲೂಕು ಘಟಕದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ತಾಲೂಕ ಉತ್ತಮ ಶಿಕ್ಷಕ ಪ್ರಶಸ್ತಿ’ಗೆ ಮಸ್ಕಿಯ ಪ್ರಭವಿತುಂ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೃಷ್ಣಕುಮಾರ ಮ್ಯಾಳ ಅವರು ಭಾಜನರಾಗಿದ್ದಾರೆ.
ಪಟ್ಟಣದ ಐತಿಹಾಸಿಕ ಭ್ರಮರಾಂಭ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಜರುಗಿದ ಭವ್ಯ ‘ತಾಲೂಕ ಮಟ್ಟದ ಶೈಕ್ಷಣಿಕ ಸಮಾವೇಶ 2026’ ಸಮಾರಂಭದಲ್ಲಿ ಈ ಗೌರವ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಡಾ. ಕೃಷ್ಣಕುಮಾರ ಮ್ಯಾಳ ಅವರಿಗೆ ಪ್ರಶಸ್ತಿ ನೀಡಿ, ಅವರ ಶೈಕ್ಷಣಿಕ ಕಾರ್ಯಕ್ಷಮತೆ ಹಾಗೂ ಸಮಾಜಮುಖಿ ಶಿಕ್ಷಣ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಡಾ. ಕೃಷ್ಣಕುಮಾರ ಮ್ಯಾಳ ಅವರು ಪ್ರಭವಿತುಂ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ, ಗುಣಮಟ್ಟದ ಶಿಕ್ಷಣ ನೀಡುವಿಕೆ ಹಾಗೂ ಸದಾ ಅಪಾರ ಶೈಕ್ಷಣಿಕ ಕಾಳಜಿಯೊಂದಿಗೆ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ ಶ್ರಮಿಸುತ್ತಿರುವ ಇವರ ಕರ್ತವ್ಯನಿಷ್ಠೆಗೆ ಈ ಪ್ರಶಸ್ತಿ ಸೂಕ್ತ ಗೌರವವಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಯಿತು.
ಈ ಸಮಾವೇಶದಲ್ಲಿ ರಾಯಚೂರು ಜಿಲ್ಲಾ ಒಕ್ಕೂಟದ ಮಸ್ಕಿ ತಾಲೂಕು ಘಟಕದ ಅಧ್ಯಕ್ಷರಾದ ಶಿವಕುಮಾರ ಎಸ್., ಜಿಲ್ಲಾ ಕಾರ್ಯದರ್ಶಿಗಳಾದ ಮಸ್ಕಿ ನಾಗರಾಜ ವಕೀಲರು ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು, ಶಿಕ್ಷಣ ತಜ್ಞರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದು ಪ್ರಶಸ್ತಿ ಪುರಸ್ಕೃತರಿಗೆ ಶುಭ ಹಾರೈಸಿದರು. ಪ್ರಶಸ್ತಿ ಸ್ವೀಕರಿಸಿದ ಡಾ. ಕೃಷ್ಣಕುಮಾರ ಮ್ಯಾಳ ಅವರಿಗೆ ಕಾಲೇಜಿನ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ಸ್ನೇಹಿತರು, ವಿದ್ಯಾರ್ಥಿ ಮಿತ್ರರು ಹಾಗೂ ಸಾರ್ವಜನಿಕರಿಂದ ವ್ಯಾಪಕ ಅಭಿನಂದನೆಗಳು ವ್ಯಕ್ತವಾಗಿವೆ.