ಮರ್ಚೆಡ್ ಡೇಸ್ ಸುದ್ದಿ|ಸೈದಾಪುರ.
ಸೈದಾಪುರ: ಪಟ್ಟಣದ ಉಪ ಕೃಷಿ ಉತ್ಪನ್ನ ಮಾರುಕಟ್ಟೆ (APMC) ಆವರಣದಲ್ಲಿ ನೂತನವಾಗಿ ಆರಂಭಗೊಂಡ ಜಾನುವಾರು ಸಂತೆಗೆ ಮೊದಲ ದಿನವೇ ರೈತರಿಂದ ಅತ್ಯುತ್ತಮ ಸ್ಪಂದನೆ ದೊರೆತಿದ್ದು, ಭರ್ಜರಿ ಚಾಲನೆ ಸಿಕ್ಕಿದೆ.
ಸುತ್ತಮುತ್ತಲಿನ ವಿವಿಧ ಹಳ್ಳಿಗಳಿಂದ ಕುರಿ, ಆಡು, ದನ, ಎತ್ತು, ಎಮ್ಮೆ ಹಾಗೂ ನಾಟಿ ಕೋಳಿಗಳ ಮಾರಾಟ ಮತ್ತು ಖರೀದಿಗೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾರುಕಟ್ಟೆಗೆ ಆಗಮಿಸಿದ್ದ ರೈತರನ್ನು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರನ್ನು ರೈತರು ಶಾಲು ಹೊದಿಸಿ, ಸನ್ಮಾನಿಸಿ ಗೌರವಿಸಿದರು.
ಬಳಿಕ ಮಾತನಾಡಿದ ಅವರು, “ರೈತರು ತಮ್ಮ ಜಾನುವಾರುಗಳ ಮಾರಾಟಕ್ಕಾಗಿ ದೂರದ ಊರುಗಳ ಸಂತೆಗಳಿಗೆ ತೆರಳಿ ಸಮಯ ಮತ್ತು ಹೆಚ್ಚಿನ ಸಾರಿಗೆ ವೆಚ್ಚ ವ್ಯಯಿಸುತ್ತಿದ್ದರು. ಆ ಹೊರೆಯನ್ನು ತಪ್ಪಿಸಲು ಸೈದಾಪುರದಲ್ಲೇ ಪ್ರತಿ ಗುರುವಾರ ಜಾನುವಾರು ಸಂತೆ ಆಯೋಜಿಸುತ್ತಿರುವುದು ಸ್ಥಳೀಯ ರೈತರಿಗೆ ವರದಾನವಾಗಲಿದೆ” ಎಂದು ತಿಳಿಸಿದರು.
ಅಲ್ಲದೆ, ಈ ಸಂತೆ ಆವರಣದಲ್ಲಿ ರೈತರಿಗೆ ಮತ್ತು ಜಾನುವಾರುಗಳಿಗೆ ಅಗತ್ಯವಿರುವ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುವುದು, ಸೈದಾಪುರ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ರೈತರು ಪ್ರತಿ ಗುರುವಾರ ನಡೆಯುವ ಈ ಸಂತೆಯ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.