
ಮರ್ಚೆಡ್ ಡೇಸ್ ಸುದ್ದಿ|ಕನಕಗಿರಿ.
ಕನಕಗಿರಿ: ಇಲ್ಲಿನ ಪಟ್ಟಣದ ಹೊರವಲಯದಲ್ಲಿ ನೆಲೆಸಿರುವ, ಭಕ್ತರ ಇಷ್ಟಾರ್ಥ ಸಿದ್ಧಿಸುವ ಆರೋಗ್ಯ ದೈವ ಶ್ರೀ ತೊಂಡಿತೇವರಪ್ಪ ಸ್ವಾಮಿಯ (ಕಂಠೀರಂಗ) ವಾರ್ಷಿಕ ರಥೋತ್ಸವವು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಹಾಗೂ ನಯನಮನೋಹರ ವೈಭವದೊಂದಿಗೆ ನಿನ್ನೆ ಸಂಭ್ರಮದಿಂದ ಜರುಗಿತು. ಪ್ರತಿವರ್ಷದಂತೆ ಈ ಬಾರಿಯೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಉತ್ಸವವು ಸಂಪನ್ನಗೊಂಡಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ದೇವಾಲಯದ ಆವರಣದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ಗರಿಗೆದರಿದ್ದವು. ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಭವ್ಯ ಅಲಂಕಾರವನ್ನು ನೆರವೇರಿಸಿ ಮಂಗಳಾರತಿ ಬೆಳಗಲಾಯಿತು. ದೂರದೂರುಗಳಿಂದ ಆಗಮಿಸಿದ ಭಕ್ತಾದಿಗಳಿಗೆ ದೇವಾಲಯ ಸಮಿತಿಯ ವತಿಯಿಂದ ಪ್ರಸಾದ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು.
ಸಂಜೆ ರಥೋತ್ಸವ ಆರಂಭವಾಗುತ್ತಿದ್ದಂತೆ ಇಡೀ ಪರಿಸರ ಭಕ್ತಿಸಾಗರದಲ್ಲಿ ಮುಳುಗಿತು. ಕನಕಗಿರಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಆಗಮಿಸಿದ್ದ ಅಪಾರ ಭಕ್ತಸ್ತೋಮ ಸಾಂಪ್ರದಾಯಿಕ ಸಂಭ್ರಮದೊಂದಿಗೆ ತೇರನ್ನು ಎಳೆದರು. ಈ ವೇಳೆ ಭಕ್ತರು ಮುಗಿಲುಮುಟ್ಟುವಂತೆ ಮೊಳಗಿಸಿದ “ಜೈ ಶ್ರೀ ರಾಮ್… ಜೈ ಶ್ರೀ ರಾಮ್!” ಜಯಘೋಷಗಳು ಇಡೀ ಆವರಣದಲ್ಲಿ ಹೊಸ ಚೈತನ್ಯ ಹಾಗೂ ಭಕ್ತಿಯುತ್ಸಾಹವನ್ನು ಇಮ್ಮಡಿಸಿತು.
ಭಕ್ತರು ಭಕ್ತಿಭಾವದಿಂದ ರಥಕ್ಕೆ ಉತ್ತತ್ತಿ, ಹಣ್ಣು-ಕಾಯಿ ಸಮರ್ಪಿಸಿ ಶ್ರೀ ತೊಂಡಿತೇವರಪ್ಪ ಸ್ವಾಮಿಯ ಕೃಪೆಗೆ ಪಾತ್ರರಾದರು. ಹಿಂದಿನ ಗತವೈಭವವನ್ನು ನೆನಪಿಸುವಂತೆ ಕಣ್ಮನ ಸೆಳೆದ ಈ ಬಾರಿಯ ರಥೋತ್ಸವವು, ಜನರಿಗೆ ಆರೋಗ್ಯ ಮತ್ತು ಸುಖ-ಶಾಂತಿ ಕರುಣಿಸುವ ಆಶಯದೊಂದಿಗೆ ಅತ್ಯಂತ ಯಶಸ್ವಿಯಾಗಿ ನೆರವೇರಿತು.