ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.
ಗಂಗಾವತಿ: ತಾಲೂಕಿನ ವಿಶೇಷ ಚೇತನರು ಎದುರಿಸುತ್ತಿರುವ ನಾನಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಹಸೀಲ್ದಾರ್ ವಸಂತ ಕುಮಾರಿ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಕುಂದು-ಕೊರತೆಗಳ ಪರಿಶೀಲನಾ ಸಭೆ ಜರುಗಿತು. ಸಭೆಯಲ್ಲಿ ತಾಲೂಕಿನಾದ್ಯಂತ ಆಗಮಿಸಿದ್ದ ವಿಶೇಷ ಚೇತನರ ಮೂಲಭೂತ ಸೌಕರ್ಯಗಳ ಕೊರತೆ, ಮಾಸಾಶನ ವಿತರಣೆಯಲ್ಲಿನ ಗೊಂದಲ, ಸರ್ಕಾರದ ಶೇ. ೫ರ ಮೀಸಲಾತಿ ಅನುದಾನ ಬಳಕೆ ಹಾಗೂ ಸಾರಿಗೆ ಸಮಸ್ಯೆಗಳ ಕುರಿತು ಮುಖಂಡರು ಮತ್ತು ಅಧಿಕಾರಿಗಳ ನಡುವೆ ಸುದೀರ್ಘ ಹಾಗೂ ಗಂಭೀರ ಚರ್ಚೆ ನಡೆಯಿತು.
ಸಭೆಯಲ್ಲಿ ವಿಶೇಷ ಚೇತನರ ಹಿತದೃಷ್ಟಿಯಿಂದ ಹಲವು ಪ್ರಮುಖ ಬೇಡಿಕೆಗಳನ್ನು ಮಂಡಿಸಲಾಯಿತು. ತಹಸೀಲ್ದಾರ್ ಕಚೇರಿ ಸೇರಿದಂತೆ ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಸುಗಮ ಸಂಚಾರಕ್ಕಾಗಿ ಕೂಡಲೇ ರಾಂಪ್, ಲಿಫ್ಟ್ ಹಾಗೂ ವೀಲ್ ಚೇರ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಲಾಯಿತು. ಕಳೆದ ಜುಲೈ ೩೧ ರಂದು ನಡೆದ ಪಿಂಚಣಿ ಅದಾಲತ್‌ನಿಂದ ಯಾವುದೇ ಪ್ರಯೋಜನವಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಮುಖಂಡರು, ತಡೆಹಿಡಿಯಲಾದ ಅಂಗವಿಕಲ, ವೃದ್ಧಾಪ್ಯ ಹಾಗೂ ವಿಧವಾ ವೇತನಗಳನ್ನು ಶೀಘ್ರವೇ ಬಿಡುಗಡೆ ಮಾಡಬೇಕು, ೨೦೨೨ ರಿಂದ ೨೦೨೬ ರವರೆಗಿನ ಶೇ. ೫ರ ಅನುದಾನದಡಿ ಬಾಕಿ ಉಳಿದಿರುವ ತ್ರಿಚಕ್ರ ವಾಹನಗಳನ್ನು ವಿತರಿಸಬೇಕು ಮತ್ತು ನಗರಸಭೆಯ ಸ್ವಯಂ ಉದ್ಯೋಗ ಸಹಾಯಧನದ ಕಠಿಣ ಷರತ್ತುಗಳನ್ನು ಸಡಿಲಿಸಿ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಬೇಕೆಂದು ಒತ್ತಾಯಿಸಿದರು.
ಸಾರಿಗೆ ಮತ್ತು ಮೂಲಸೌಕರ್ಯಗಳ ಕುರಿತು ಮಾತನಾಡಿದ ಮುಖಂಡ ನರಸಪ್ಪ ಇಂಗಳಗಿ, ಸ್ಥಳೀಯ ಕೆಎಸ್‌ಆರ್‌ಟಿಸಿ ಡಿಪೋದಲ್ಲಿಯೇ ಬಸ್ ಪಾಸ್ ವಿತರಣೆ/ನವೀಕರಣಕ್ಕೆ ಕ್ರಮ ಕೈಗೊಳ್ಳಬೇಕು, ಬಸ್‌ಗಳಲ್ಲಿ ಆಸನ ಮೀಸಲಾತಿ ಕಡ್ಡಾಯಗೊಳಿಸಬೇಕು ಮತ್ತು ಬಸ್ ನಿಲ್ದಾಣದ ಶೌಚಾಲಯಗಳಿಗೆ ವೀಲ್ ಚೇರ್ ಸುಗಮ ಮಾರ್ಗ ನಿರ್ಮಿಸಬೇಕು ಎಂದು ಮನವಿ ಮಾಡಿದರು. ಜೊತೆಗೆ ಕನಕದಾಸ ವೃತ್ತದಲ್ಲಿರುವ ಹಳೆಯ ಸಮುದಾಯ ಭವನವನ್ನು ವಿಶೇಷ ಚೇತನರ ಬಳಕೆಗೆ ಹಸ್ತಾಂತರಿಸುವಂತೆ ಕೋರಿದರು. ಇದೇ ವೇಳೆ ಇಂತಹ ಮಹತ್ವದ ಸಭೆಗೆ ಮಾಧ್ಯಮ ಪ್ರತಿನಿಧಿಗಳನ್ನು ಆಹ್ವಾನಿಸದಿರುವ ಬಗ್ಗೆ ಉಪ ತಹಸೀಲ್ದಾರರ ಮೌನವು ಸಭೆಯಲ್ಲಿದ್ದವರ ಅಸಮಾಧಾನಕ್ಕೆ ಕಾರಣವಾಯಿತು.
ಮನವಿಗಳನ್ನು ಆಲಿಸಿದ ತಹಸೀಲ್ದಾರ್ ವಸಂತ ಕುಮಾರಿ ಮಾತನಾಡಿ, “ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವ ವಿಶೇಷ ಚೇತನರ ಆದಾಯ ಮಿತಿಯನ್ನು ₹೧,೨೦,೦೦೦ಕ್ಕೆ ಸಡಿಲಿಸಿದೆ. ಏಪ್ರಿಲ್ ೨೦೨೬ ರಿಂದ ತಡೆಹಿಡಿಯಲಾಗಿರುವ ಎಲ್ಲಾ ಪಿಂಚಣಿಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು ಹಾಗೂ ಉಳಿದ ಸಮಸ್ಯೆಗಳನ್ನು ಹಂತ-ಹಂತವಾಗಿ ಬಗೆಹರಿಸಲಾಗುವುದು” ಎಂದು ಭರವಸೆ ನೀಡಿದರು. ನಗರಸಭೆ ವ್ಯವಸ್ಥಾಪಕ ಷಣ್ಮುಖಪ್ಪ, ಕೇಸ್‌ವರ್ಕರ್ ನಾಗರಾಜ್ ಹಾಗೂ ಬಿಇಒ ಅಧಿಕಾರಿಗಳು ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಬದ್ಧತೆ ವ್ಯಕ್ತಪಡಿಸಿದರು. ಸಭೆಯಲ್ಲಿ ತಾಲೂಕು ಪಂಚಾಯತ್ ಇಒ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮತ್ತು ಅಂಗವಿಕಲ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.