
ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.
ಗಂಗಾವತಿ: ವರ್ಷಗಳ ಕಾಲ ನ್ಯಾಯಕ್ಕಾಗಿ ನಡೆಸಿದ ಕಾನೂನು ಹೋರಾಟಗಳು ಕೇವಲ ಕಡತಗಳಲ್ಲೇ ಕರಗಿಹೋಗಿ, ಬೇಸತ್ತ ಕುಟುಂಬವೊಂದು ಈಗ ವ್ಯವಸ್ಥೆಯ ವಿರುದ್ಧವೇ ಸಿಡಿದೆದ್ದಿದೆ. ಗಂಗಾವತಿ ನಗರದ ವಾಲ್ಮೀಕಿ ಸರ್ಕಲ್ ನಿವಾಸಿ ಜೋಗಿನ್ ರಮೇಶ್ ಹಾಗೂ ಅವರ ಕುಟುಂಬದವರು, ತಮಗೆ ಸಲ್ಲಬೇಕಾದ ಅನ್ಯಾಯದ ಪರಿಹಾರಕ್ಕಾಗಿ ಅಂತಿಮವಾಗಿ ‘ಎಸ್ಐಆರ್’ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸುವ ಕಠಿಣ ನಿರ್ಧಾರ ಕೈಗೊಂಡಿದ್ದಾರೆ.
ಪ್ರಕರಣದ ಹಿನ್ನೆಲೆಗೆ ಕಣ್ಣು ಹಾಯಿಸಿದರೆ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸರ್ವೇ ನಂ. 46/ಅ ನಲ್ಲಿ ಜೋಗಿನ್ ರಮೇಶ್ ಅವರ ತಂದೆ ಹುಲಗಪ್ಪ ಜೋಗಿನ್ ಕುಟುಂಬಕ್ಕೆ ಸೇರಿದ ಒಟ್ಟು 16 ಎಕರೆ 11 ಗುಂಟೆ ವಿಶಾಲ ಜಮೀನು ಇತ್ತು. ಇದರಲ್ಲಿ 1 ಎಕರೆ 33 ಗುಂಟೆ ಜಮೀನು ಟಿ.ಬಿ.ಪಿ ಕಾಲುವೆ ನಿರ್ಮಾಣಕ್ಕಾಗಿ ಸರ್ಕಾರದ ಪಾಲಾದರೂ, ಉಳಿದ 14 ಎಕರೆ 18 ಗುಂಟೆ ಸ್ವಂತ ಜಮೀನು ಮಾತ್ರ ಇಂದಿಗೂ ಮೂಲ ವಾರಸುದಾರರ ಕೈ ಸೇರದೇ ಅತಂತ್ರವಾಗಿದೆ.
ಉನ್ನತ ಮಟ್ಟದ ಅಧಿಕಾರಿಗಳ ಸ್ಪಷ್ಟ ಆದೇಶವಿದ್ದರೂ ಸಹ, ಕೆಳಹಂತದ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ ಹಾಗೂ ವಿಳಂಬ ಧೋರಣೆಯಿಂದಾಗಿ ಬಡ ಕುಟುಂಬಕ್ಕೆ ಸಿಗಬೇಕಾದ ನ್ಯಾಯಯುತ ಹಕ್ಕು ಅನ್ಯಾಯದ ಬಲೆಯಲ್ಲಿ ಸಿಲುಕಿಕೊಂಡಿದೆ. ಕಾನೂನಿನ ಚೌಕಟ್ಟಿನಲ್ಲಿ ತಾಳ್ಮೆಯಿಂದ ನಡೆಸಿದ ಎಲ್ಲ ಪ್ರಯತ್ನಗಳೂ ವಿಫಲವಾದಾಗ, ಕುಟುಂಬದ ನೋವು ಆಕ್ರೋಶವಾಗಿ ಮಾರ್ಪಟ್ಟು ಈ ದಿಢೀರ್ ಬಹಿಷ್ಕಾರದ ನಿರ್ಧಾರಕ್ಕೆ ಕಾರಣವಾಗಿದೆ.
ಈ ಗಂಭೀರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು, ಈ ಕುರಿತು ಕೂಲಂಕುಷವಾಗಿ ಪರಿಶೀಲಿಸಿ ತಕ್ಷಣ ವರದಿ ಸಲ್ಲಿಸುವಂತೆ ಗಂಗಾವತಿಯ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಪತ್ರ ಸಂಖ್ಯೆ: ಉಪನಿಸಕಆಕೊ:SIR ಬಹಿಷ್ಕಾರ:ಸಿಆರ್-1:2026-27, ದಿನಾಂಕ: 20-07-2026). ಆದರೂ ಸಹ ಕೆಳಹಂತದಲ್ಲಿ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಗದಿರುವುದು ವ್ಯವಸ್ಥೆಯ ದೋಷವನ್ನು ಎತ್ತಿ ತೋರಿಸುತ್ತದೆ.
ತಮ್ಮದೇ ಸ್ವಂತ ಆಸ್ತಿಯನ್ನು ಪಡೆಯಲು ದಶಕಗಳಿಂದ ಕಚೇರಿಗಳ ಅಲೆದಾಡಿ ಸುಸ್ತಾಗಿರುವ ಜೋಗಿನ್ ರಮೇಶ್ ಕುಟುಂಬಕ್ಕೆ ಈಗ ‘ಎಸ್ಐಆರ್’ ಬಹಿಷ್ಕಾರವೇ ಅಂತಿಮ ಅಸ್ತ್ರವಾಗಿ ಉಳಿದಿದೆ. ಇನ್ನು ಮುಂದೆಯಾದರೂ ಜಿಲ್ಲಾಡಳಿತ ಹಾಗೂ ಸರ್ಕಾರ ಎಚ್ಚೆತ್ತುಕೊಂಡು, ಸಂತ್ರಸ್ತ ಕುಟುಂಬಕ್ಕೆ ಅವರ ಹಕ್ಕಿನ ಜಮೀನನ್ನು ತಕ್ಷಣವೇ ಬಿಡಿಸಿಕೊಡುವ ಮೂಲಕ ನ್ಯಾಯ ಒದಗಿಸಿಕೊಡಬೇಕಿದೆ.