Home ಸುದ್ದಿ ರಾಜ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಕಷ್ಟ, ದೂರದ ಊರುಗಳ ಅಭ್ಯರ್ಥಿಗಳ ಪರದಾಟ ಮತ್ತು KEA-KPSC ವ್ಯವಸ್ಥೆಯ ಗಂಭೀರ ಮರುಚಿಂತನೆ ಅಗತ್ಯ.
ಸುದ್ದಿ

ರಾಜ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಕಷ್ಟ, ದೂರದ ಊರುಗಳ ಅಭ್ಯರ್ಥಿಗಳ ಪರದಾಟ ಮತ್ತು KEA-KPSC ವ್ಯವಸ್ಥೆಯ ಗಂಭೀರ ಮರುಚಿಂತನೆ ಅಗತ್ಯ.

Share
Share
ಮರ್ಚೆಡ್ ಡೇಸ್ ಸುದ್ದಿ|ಬೆಂಗಳೂರು.

ಬೆಂಗಳೂರು : ಕರ್ನಾಟಕದ ಮೂಲೆ ಮೂಲೆಗಳಿಂದ ಸರ್ಕಾರಿ ಉದ್ಯೋಗದ ಕನಸು ಹೊತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಬರುವ ಲಕ್ಷಾಂತರ ಯುವ ಜನತೆ ಅನುಭವಿಸುತ್ತಿರುವ ಯಾತನೆ ಅಷ್ಟಿಷ್ಟಲ್ಲ. ಕೇವಲ ಕೆಲವೇ ಕೆಲವು ಸಾವಿರ ಹುದ್ದೆಗಳಿಗೆ ಲಕ್ಷಾಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದಾಗ, ಕೆಇಎ (KEA) ಹಾಗೂ ಕೆಪಿಎಸ್ಸಿ (KPSC)ಯಂತಹ ಸಂಸ್ಥೆಗಳು ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಕೇವಲ ರಾಜಧಾನಿ ಬೆಂಗಳೂರು ಅಥವಾ ನಿರ್ದಿಷ್ಟ ಪ್ರಮುಖ ನಗರಗಳಿಗೆ ಮಾತ್ರ ಸೀಮಿತಗೊಳಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ರಾಜ್ಯದ ವಿವಿಧ ದೂರದ ಜಿಲ್ಲೆಗಳಿಂದ ಬರುವ ಅಭ್ಯರ್ಥಿಗಳು ತಮ್ಮ ಸ್ವಂತ ಜಿಲ್ಲೆಯನ್ನು ಬಿಟ್ಟು ನೂರಾರು ಕಿಲೋಮೀಟರ್ ದೂರವಿರುವ ಇತರೆಡೆಗೆ ಪ್ರಯಾಣಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು, ಇದು ಬಡ ಹಾಗೂ ಗ್ರಾಮೀಣ ಪ್ರತಿಭೆಗಳಿಗೆ ಆರಂಭದಲ್ಲೇ ದೊಡ್ಡ ಹೊಡೆತವಾಗುತ್ತಿದೆ.

ಪರೀಕ್ಷೆಯ ದಿನ ಹತ್ತಿರವಾಗುತ್ತಿದ್ದಂತೆ ಬಸ್ ಹಾಗೂ ರೈಲುಗಳಲ್ಲಿ ಉಂಟಾಗುವ ಗಂಟೆಗಟ್ಟಲೆ ನೂಕುನುಗ್ಗಲು, ಸರಿಯಾದ ಸಮಯಕ್ಕೆ ವಾಹನ ಸೌಲಭ್ಯ ಸಿಗದೆ ಪರದಾಡುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ಸಿವಿಲ್ ಪೊಲೀಸ್ ಕಾಸ್ಟೇಬಲ್ ಹಾಗೂ ಇತರೆ ನೇಮಕಾತಿ ಪರೀಕ್ಷೆಗಳು ಮುಗಿದ ನಂತರ ಬೆಂಗಳೂರು ರೈಲು ನಿಲ್ದಾಣದಲ್ಲಿ ಕಂಡುಬಂದ ಜನಸಾಗರವೇ ಇದಕ್ಕೆ ಜೀವಂತ ಸಾಕ್ಷಿಯಾಗಿದೆ. ತಮ್ಮ ಊರುಗಳಿಗೆ ವಾಪಸ್ ತೆರಳಲು ರೈಲು ಹತ್ತುವವರ ಸಾಲುಗಳು ಮೈಲಿಗಟ್ಟಲೆ ಕಂಡುಬಂದಿದ್ದು, ತಾಯಂದಿರು ಮಕ್ಕಳನ್ನು ಹಾಗೂ ಹೆಣ್ಣುಮಕ್ಕಳನ್ನು ಕರೆದುಕೊಂಡು ಬರುವ ಕುಟುಂಬಗಳು ಪಡುವ ಪಾಡು ಹೇಳತೀರದಾಗಿದೆ. ವಾಹನಗಳ ಕೊರತೆಯಿಂದಾಗಿ ರಾತ್ರಿ ವೇಳೆಯೂ ರಸ್ತೆಗಳಲ್ಲೇ ನಿದ್ದೆಗಣ್ಣಲ್ಲಿ ಕಾಯುವ ಅನಿವಾರ್ಯತೆ ಯುವಜನತೆಗೆ ಎದುರಾಗಿದೆ.

ಇನ್ನು ಪರೀಕ್ಷಾ ನಗರಗಳಿಗೆ ಆಗಮಿಸುವ ಅಭ್ಯರ್ಥಿಗಳಿಗೆ ಅಲ್ಲಿ ಉಳಿದುಕೊಳ್ಳಲು ಸರಿಯಾದ ವಸತಿ ಸೌಕರ್ಯಗಳಾಗಲಿ ಅಥವಾ ಶುಚಿ-ರುಚಿಯಾದ ಊಟೋಪಚಾರ ಮತ್ತು ಸ್ನಾನ ಮಾಡಲು ಸೂಕ್ತ ಹೋಟೆಲ್ ವ್ಯವಸ್ಥೆಗಳಾಗಲಿ ಸಿಗದೆ ಪರದಾಡುತ್ತಾರೆ. ಇದ್ದರೂ ಸಹ ಹೆಚ್ಚಿನ ಹಣ ತೆರಬೇಕಾದ ಪರಿಸ್ಥಿತಿ ಇರುತ್ತದೆ; ಮೊದಲೇ ಉದ್ಯೋಗವಿಲ್ಲದೆ, ಕಷ್ಟಪಟ್ಟು ಓದಿ ಪರೀಕ್ಷೆ ಬರೆಯಲು ಬರುವ ಬಡ ವಿದ್ಯಾರ್ಥಿಗಳಿಗೆ ಈ ಅನಧಿಕೃತ ಬೆಲೆ ಏರಿಕೆ ಮತ್ತು ಖರ್ಚುಗಳು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಹಣದ ಅಡಚಣೆಯಿಂದಾಗಿ ಅನೇಕರು ನೆಂಟರ ಮನೆಗಳಲ್ಲಿ ಅಥವಾ ಬೀದಿ ಬದಿಗಳಲ್ಲಿ ರಾತ್ರಿ ಕಳೆಯುವ ದೃಶ್ಯಗಳು ಮನಕಲುಕುವಂತಿರುತ್ತವೆ.

ಈ ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿಯೂ ಅಭ್ಯರ್ಥಿಗಳನ್ನು ನೂರಾರು ಕಿಲೋಮೀಟರ್ ದೂರ ಅಲೆದಾಡಿಸುವುದು ಎಷ್ಟರಮಟ್ಟಿಗೆ ಸರಿ ಎಂಬ ಗಂಭೀರ ಪ್ರಶ್ನೆ ಮೂಡಿದೆ. ಒಂದು ವೇಳೆ ವ್ಯವಸ್ಥೆಯ ನಿರ್ವಹಣೆಗೆ ಹೆಚ್ಚಿನ ವೆಚ್ಚವಾಗುತ್ತದೆ ಎಂದಾದರೆ, ಪರೀಕ್ಷಾ ಶುಲ್ಕವನ್ನು ಅಲ್ಪ ಪ್ರಮಾಣದಲ್ಲಿ ಹೆಚ್ಚು ಮಾಡಿದರೂ ಪರವಾಗಿಲ್ಲ, ಪ್ರತಿಯೊಬ್ಬ ಅಭ್ಯರ್ಥಿಗೂ ಅವರವರ ಸ್ವಂತ ಜಿಲ್ಲೆಯಲ್ಲಿ ಅಥವಾ ಹತ್ತಿರದ ತಾಲೂಕು ಕೇಂದ್ರಗಳಲ್ಲಿಯೇ ಪರೀಕ್ಷೆ ಬರೆಯಲು ಸುಸಜ್ಜಿತವಾದ ವ್ಯವಸ್ಥೆಯನ್ನು ಕಲ್ಪಿಸಬೇಕು. ಸಮರ್ಪಕ ಸೌಲಭ್ಯಗಳಿಲ್ಲದೆ, ಸರಿಯಾಗಿ ನಿದ್ರೆ ಮತ್ತು ಊಟವಿಲ್ಲದೆ ಕೇಂದ್ರಗಳಿಗೆ ಬಂದು ತಲುಪುವ ಅಭ್ಯರ್ಥಿಗಳು ತಮ್ಮ ನೈಜ ಪ್ರತಿಭೆಯನ್ನು ಪರೀಕ್ಷೆಯಲ್ಲಿ ಸಂಪೂರ್ಣವಾಗಿ ತೋರಲು ವಿಫಲರಾಗುವ ಆತಂಕವಿದೆ.

ಆದ್ದರಿಂದ ಕೆಇಎ (KEA) ಹಾಗೂ ಕೆಪಿಎಸ್ಸಿ (KPSC) ಪ್ರಾಧಿಕಾರಗಳು ಈ ಗಂಭೀರ ಸಮಸ್ಯೆಯನ್ನು ಕೂಡಲೇ ಪರಿಗಣಿಸಿ, ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜಿಲ್ಲಾವಾರು ಪರೀಕ್ಷಾ ಕೇಂದ್ರಗಳ ವಿಸ್ತರಣೆಗೆ ಆದ್ಯತೆ ನೀಡಬೇಕು. ದೂರದ ಊರುಗಳಿಂದ ಬರುವ ಹೆಣ್ಣುಮಕ್ಕಳು ಹಾಗೂ ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಅಭ್ಯರ್ಥಿಗಳ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ವಿಕೇಂದ್ರೀಕೃತ ಪರೀಕ್ಷಾ ಪದ್ಧತಿಯನ್ನು ಜಾರಿಗೆ ತರಬೇಕು. ಆಗ ಮಾತ್ರ ರಾಜ್ಯದ ಪ್ರತಿಯೊಬ್ಬ ಯುವಕನಿಗೂ ಸಮಾನ ಅವಕಾಶ ಸಿಕ್ಕಂತಾಗಿ, ಪರೀಕ್ಷಾ ವ್ಯವಸ್ಥೆಯು ಮತ್ತಷ್ಟು ಪಾರದರ್ಶಕ ಹಾಗೂ ಮಾನವೀಯ ನೆಲೆಗಟ್ಟಿನಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...