ಮರ್ಚೆಡ್ ಡೇಸ್ ಸುದ್ದಿ|ಬಳ್ಳಾರಿ.
ಬಳ್ಳಾರಿ: ರಂಗಭೂಮಿ ಮತ್ತು ಪತ್ರಿಕೋದ್ಯಮವು ವ್ಯಕ್ತಿಯೊಬ್ಬನ ಜೀವನದ ದಿಕ್ಕನ್ನು ಸಂಪೂರ್ಣವಾಗಿ ಬದಲಿಸಬಲ್ಲದು ಎಂಬುದಕ್ಕೆ ಕುಖ್ಯಾತ ಕಾಡುಗಳ್ಳ ವೀರಪ್ಪನ್ ಮಾಜಿ ಸಹಚರ ಅಂಬುರಾಜ್ ಅವರ ಜೀವನವೇ ಸಾಕ್ಷಿಯಾಗಿದೆ ಎಂದು ಬಳ್ಳಾರಿಯ ಪಾಂಚಜನ್ಯ ಸಭಾಂಗಣದಲ್ಲಿ ನಡೆದ ‘ರಂಗ ಚಾವಡಿ’ ಕಾರ್ಯಕ್ರಮದಲ್ಲಿ ಮೂಡಿಬಂದಿದೆ.
ರಂಗತೋರಣದ ಕಾರ್ಯದರ್ಶಿಗಳಾದ ಪ್ರಭುದೇವ ಕಪ್ಪಗಲ್ಲು ಅವರ ನೇತೃತ್ವದಲ್ಲಿ ಈ ವಿಶೇಷ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು. ತಮಿಳುನಾಡಿನ ಈರೋಡ್ ಜಿಲ್ಲೆಯ ವನವಾಸಿ ಹಾಗೂ ವೀರಪ್ಪನ್ ಮಾಜಿ ಸಹಚರರಾದ ಅಂಬುರಾಜ್ ಮತ್ತು ಹಿರಿಯ ರಂಗ ನಿರ್ದೇಶಕ ಹುಲುಗಪ್ಪ ಕಟ್ಟಿಮನಿ (ಮೈಸೂರು) ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀ ಸರಳಾದೇವಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ದಸ್ತಗಿರಿ ಸಾಬ್ ದಿನ್ನಿ ಅವರು ಅತಿಥಿಗಳನ್ನು ರಂಗದ ಮೇಲೆ ಸಂದರ್ಶನ ಮಾಡುವ ಮೂಲಕ ಸಂವಾದವನ್ನು ಅತ್ಯಂತ ಆಕರ್ಷಕವಾಗಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ತಮ್ಮ ಬದುಕಿನ ರೋಚಕ ಹಾದಿಯನ್ನು ಬಿಚ್ಚಿಟ್ಟ ಅಂಬುರಾಜ್, ವೀರಪ್ಪನ್ ತನ್ನನ್ನು ಗ್ಯಾಂಗ್ನಲ್ಲಿ ಬಲವಂತವಾಗಿ ಇರಿಸಿಕೊಂಡಿದ್ದ ಕಥೆಯನ್ನು ಹಂಚಿಕೊಂಡರು. ಟಾಡಾ ಕಾಯ್ದೆಯಡಿ ಶರಣಾಗಿ ಸುಮಾರು 18 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಸಂದರ್ಭದಲ್ಲಿ, ಮೈಸೂರಿನ ಹಿರಿಯ ರಂಗ ನಿರ್ದೇಶಕ ಹುಲುಗಪ್ಪ ಕಟ್ಟಿಮನಿ ಅವರು ಕೈದಿಗಳಿಗಾಗಿ ಹಮ್ಮಿಕೊಂಡಿದ್ದ ರಂಗ ಶಿಬಿರದಲ್ಲಿ ಅಂಬುರಾಜ್ ಸಕ್ರಿಯವಾಗಿ ಭಾಗವಹಿಸಿದ್ದರು.
ಈ ‘ಜೈಲು ರಂಗ ಯಾತ್ರೆ’ ರಾಜ್ಯದಾದ್ಯಂತ ಪ್ರದರ್ಶನಗೊಂಡು ಭಾರಿ ಮೆಚ್ಚುಗೆ ಗಳಿಸಿತ್ತು. ಅಷ್ಟೇ ಅಲ್ಲದೆ, ಜೈಲಿನ ಗ್ರಂಥಾಲಯದಲ್ಲಿ ನಿತ್ಯ ಅಧ್ಯಯನ ನಡೆಸಿದ ಅಂಬುರಾಜ್ ಪತ್ರಿಕೋದ್ಯಮದಲ್ಲಿ ಪದವಿ ಪಡೆದು ಎಲ್ಲರಿಗೂ ಮಾದರಿಯಾದರು. ಇವರ ಸನ್ನಡತೆಯನ್ನು ಪರಿಗಣಿಸಿ ಸರ್ಕಾರ ಜೈಲಿನಿಂದ ಬಿಡುಗಡೆಗೊಳಿಸಿದ್ದು, ಪ್ರಸ್ತುತ ಅಂಬುರಾಜ್ ಅವರು ಶಾಲೆಯೊಂದನ್ನು ಆರಂಭಿಸಿ, ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡುತ್ತಾ ಸಮಾಜಮುಖಿ ಜೀವನ ನಡೆಸುತ್ತಿರುವುದು ವಿಶೇಷವಾಗಿತ್ತು.
ಈ ಅರ್ಥಪೂರ್ಣ ಕಾರ್ಯಕ್ರಮದ ಆರಂಭದಲ್ಲಿ ಸಾಧಕ ತ್ರಯರಾದ ಬಳ್ಳಾರಿ ರಾಘವ, ಪಿ. ರಂಜಾನ್ ಸಾಬ್ ಹಾಗೂ ಗಮಕ ಕಲಾವಿದ ಜೋಳದರಾಶಿ ದೊಡ್ಡನಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಹಿರಿಯ ರಂಗ ಕಲಾವಿದರಾದ ಮಧುರ ಸಂಗೀತ ಹಾಗೂ ವೀಣಾ ಆದವಾನಿ ಅವರು ಮಧುರ ಭಕ್ತಿಗೀತೆಗಳನ್ನು ಹಾಡಿದರು. ಇವರಿಗೆ ತಿಪ್ಪೇಸ್ವಾಮಿ ಮುದ್ದಟನೂರು ಹಾರ್ಮೋನಿಯಂ ಹಾಗೂ ಎಂ. ವೀರೇಶ್ ತಬಲಾ ಸಾಥ್ ನೀಡಿದರು. ರಂಗತೋರಣದ ಕಾರ್ಯದರ್ಶಿಗಳಾದ ಪ್ರಭುದೇವ ಕಪ್ಪಗಲ್ಲು ಕಾರ್ಯಕ್ರಮವನ್ನು ನಿರೂಪಿಸಿ ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ರಂಗತೋರಣದ ಎಲ್ಲಾ ಪದಾಧಿಕಾರಿಗಳು ಹಾಗೂ ನಗರದ ಗಣ್ಯರು ಉಪಸ್ಥಿತರಿದ್ದರು.
