
ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.
ಶ್ರೀರಾಮನಗರ : ಕಲ್ಯಾಣ ಕರ್ನಾಟ ಹಾಗೂ ಉತ್ತರ ಕರ್ನಾಟಕ ಈ ಭಾಗಗಳಲ್ಲಿ ತೀವ್ರವಾದ ಮಳೆಯ ಕೊರತೆ ಹಾಗೂ ಬರಗಾಲದ ಪರಿಸ್ಥಿತಿಯನ್ನು ಹಿಮ್ಮೆಟ್ಟಿಸಲು, ಶ್ರೀ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವರುಣದೇವನನ್ನು ಒಲಿಸಲು ವಿಶಿಷ್ಟ ಜಾನಪದ ಆಚರಣೆಯ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸುತ್ತಮುತ್ತಲಿನ ಶೇಕಡಾ 80% ರಷ್ಟು ಕೃಷಿ ಪ್ರದೇಶವು ಮಳೆಯಿಲ್ಲದೆ ಬಾಡುತ್ತಿರುವುದರಿಂದ, ರೈತರ ಕಷ್ಟಕ್ಕೆ ಸ್ಪಂದಿಸುವ ಸದುದ್ದೇಶದಿಂದ ಈ ಐತಿಹಾಸಿಕ ಆಚರಣೆಯನ್ನು ಹಮ್ಮಿಕೊಳ್ಳಲಾಯಿತು.
ಕೆಕೆ ಬಾಗ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾಗದೆ ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ, ಶಾಲೆಯ ಮಕ್ಕಳು ಸಾಂಪ್ರದಾಯಿಕ ‘ಗುರ್ಜಿ ವರ್ಧ’ ವೇಷ ಧರಿಸಿದರು. ಮೈಮೇಲೆ ಬೇವಿನ ಸೊಪ್ಪುಗಳನ್ನು ಸುತ್ತಿಕೊಂಡು, ‘ಗುರ್ಜಿ ಗುರ್ಜಿ ಎಲ್ಲಾಡಿ ಬಂದೆ’ ಎಂದು ಹಾಡುತ್ತಾ, ‘ಹುಯ್ಯೋ ಹುಯ್ಯೋ ಮಳೆರಾಯ’ ಎಂದು ಹಳ್ಳಿಯಾದ್ಯಂತ ಕುಣಿದು ಕುಪ್ಪಳಿಸುವ ಮೂಲಕ ಮಳೆರಾಯನನ್ನು ಭಕ್ತಿಯಿಂದ ಕರೆಯಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಕಾರ್ಯದರ್ಶಿ ಜಗನ್ನಾಥ್ ಆಲಂಪಲ್ಲಿ ಮಾತನಾಡಿ, ಪ್ರದೇಶದಲ್ಲಿ ಶೇಕಡಾ 61% ರಷ್ಟು ಮಳೆ ಕೊರತೆಯಿದ್ದು ರೈತರು ಕಂಗಾಲಾಗಿದ್ದಾರೆ. ರೈತರ ಕಷ್ಟವನ್ನು ಮನಗಂಡು ಮಕ್ಕಳು ಈ ಜಾನಪದ ಆಚರಣೆಯ ಮೂಲಕ ಜಾಗೃತಿ ಮೂಡಿಸಿದ್ದಾರೆ ಎಂದರು. ಇದೇ ವೇಳೆ ಗುರ್ಜಿ ಆಕೃತಿ ಹೊತ್ತ ವಿದ್ಯಾರ್ಥಿಯ ಮೇಲೆ ನೀರು ಸುರಿಯುವ ಸಾಂಕೇತಿಕ ವಿಧಿ ನೆರವೇರಿಸಲಾಯಿತು.
ಮುಖ್ಯ ಗುರುಗಳಾದ ಶಾರುನ್ ಕುಮಾರಿ ಮಾತನಾಡಿ, ನಾಡಿನಾದ್ಯಂತ ಮಳೆ ಬೇಗನೆೆ ಸುರಿದು ರೈತರ ಮೊಗದಲ್ಲಿ ಮಂದಹಾಸ ಮೂಡಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಶಾಂತಿ, ರವಿಕುಮಾರ್, ಜಗದೀಶ್, ಕುಮಾರಿ ಲಾವಣ್ಯ ಸೇರಿದಂತೆ ಸಮಸ್ತ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ‘ಬಾರೋ ಬಾರೋ ಮಳೆರಾಯ’ ಎಂದು ಪ್ರಾರ್ಥನೆಯಲ್ಲಿ ಪಾಲ್ಗೊಂಡರು.