ಮರ್ಚೆಡ್ ಡೇಸ್ ಸುದ್ದಿ.
ಕಾರಟಗಿ, : ರಾಷ್ಟ್ರೀಯ ಆಯುಷ್ ಅಭಿಯಾನದಡಿ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೆನ್ನೂರು ಗ್ರಾಮದಲ್ಲಿ ಶನಿವಾರ ಬೃಹತ್ ಆಯುಷ್ ಆರೋಗ್ಯ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಶಾಲಾ ಮಕ್ಕಳೊಂದಿಗೆ ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಆರೋಗ್ಯದ ಕುರಿತು ಅರಿವು ಮೂಡಿಸಲಾಯಿತು. ಬಳಿಕ ಗ್ರಾಮದ ಹಿರಿಯರು, ಶಾಲಾ ಶಿಕ್ಷಕರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಆಯುಷ್ ಆರೋಗ್ಯ ಶಿಬಿರಕ್ಕೆ ವಿಧಿವತ್ತಾಗಿ ಚಾಲನೆ ನೀಡಲಾಯಿತು.
ಶಿಬಿರದಲ್ಲಿ ಸುಮಾರು 350 ಜನರ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ತಜ್ಞ ವೈದ್ಯರಾದ ಡಾ. ವೀಣಾ ಬಿಜ್ಜಳ ಹಾಗೂ ಡಾ. ದೀಪ್ತಿ ಕುರುಬರ ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸಿದರು. ಇದೇ ವೇಳೆ 150 ವಿದ್ಯಾರ್ಥಿಗಳ ರಕ್ತದ ಗುಂಪು ಪರೀಕ್ಷೆ ನಡೆಸಿ ಅವರಿಗೆ ರಕ್ತದ ಗುಂಪಿನ ಪ್ರಮಾಣಪತ್ರ ವಿತರಿಸಲಾಯಿತು. ಜೊತೆಗೆ ಹಮ್ಮಿಕೊಳ್ಳಲಾದ ರಕ್ತದಾನ ಶಿಬಿರದಲ್ಲಿ 15 ಮಂದಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ ಮಾನವೀಯ ಸೇವೆಯ ಸಂದೇಶ ಸಾರಿದರು.
ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಪರ್ವತಗೌಡ ಹಿರೇಗೌಡರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಂದಿಹಳ್ಳಿ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ಸುಂಕದ್ ಸ್ವಾಗತಿಸಿದರು. ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಗುರುರಾಜ ಉಮಚಗಿ ಪ್ರಾಸ್ತಾವಿಕವಾಗಿ ಮಾತನಾಡಿ ಆಯುಷ್ ಚಿಕಿತ್ಸಾ ಪದ್ಧತಿಯ ಮಹತ್ವವನ್ನು ವಿವರಿಸಿದರು. ನರ್ಸಿಂಗ್ ಅಧಿಕಾರಿ ದುರ್ಗಪ್ಪ ಹಾಗೂ ಫಾರ್ಮಸಿ ಅಧಿಕಾರಿ ಶ್ರೀಮತಿ ಶೈಲಾ ಔಷಧ ವಿತರಣೆ ಮಾಡಿದರು. ಯೋಗ ತರಬೇತುದಾರ ಬಸವರಾಜ್ ಕಾರ್ಯಕ್ರಮ ನಿರೂಪಿಸಿದರೆ, ಯೋಗ ತರಬೇತುದಾರ ಶ್ರೀಮತಿ ಜಯಶರಣಮ್ಮ ಸಾರ್ವಜನಿಕರ ನೋಂದಣಿ ಕಾರ್ಯ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಡಿ-ಗ್ರೂಪ್ ನೌಕರ ಶರಣಬಸವ, ಬೆನ್ನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಹಾಗೂ ಗ್ರಾಮಸ್ಥರು ಉತ್ಸಾಹದಿಂದ ಭಾಗವಹಿಸಿದರು. ಆರೋಗ್ಯ ಜಾಗೃತಿ, ಉಚಿತ ಚಿಕಿತ್ಸೆ ಮತ್ತು ರಕ್ತದಾನದಂತಹ ಸೇವಾ ಚಟುವಟಿಕೆಗಳ ಮೂಲಕ ಗ್ರಾಮೀಣ ಜನತೆಗೆ ಆರೋಗ್ಯದ ಮಹತ್ವ ಸಾರಿದ ಈ ಬೃಹತ್ ಆಯುಷ್ ಶಿಬಿರ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಯಿತು.