Home ಸಂಪಾದಕೀಯ ಎಚ್.ಕೆ.ಇ ಸೊಸೈಟಿ ಸದಸ್ಯತ್ವದ ಕೂಗು: ಸಾರ್ವಜನಿಕರ ನೇರ ಆರೋಪ ಮತ್ತು ಆಡಳಿತ ಮಂಡಳಿಯ ಸ್ಪಷ್ಟನೆ.
ಸಂಪಾದಕೀಯಸುದ್ದಿ

ಎಚ್.ಕೆ.ಇ ಸೊಸೈಟಿ ಸದಸ್ಯತ್ವದ ಕೂಗು: ಸಾರ್ವಜನಿಕರ ನೇರ ಆರೋಪ ಮತ್ತು ಆಡಳಿತ ಮಂಡಳಿಯ ಸ್ಪಷ್ಟನೆ.

Share
Share

ಮರ್ಚೇಡ್ ಡೇಸ್ ವಿಶೇಷ ವರದಿ|kalaburagi.
ಹೈಕೋರ್ಟ್ ಆದೇಶದ ಬೆನ್ನಲ್ಲೇ ಆರಂಭವಾದ ಸದಸ್ಯತ್ವ ನೋಂದಣಿ ಪ್ರಕ್ರಿಯೆ; ‘ಕೆಲವೇ ಕುಟುಂಬಗಳ ಹಿಡಿತದಿಂದ ಸಂಸ್ಥೆ ಮುಕ್ತವಾಗಲಿ’ ಎಂಬ ಕಲ್ಯಾಣ ಕರ್ನಾಟಕದ ಜನತೆಯ ಒಕ್ಕೊರಲ ಕೂಗು..

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಕಾಶಿ ಎಂದೇ ಖ್ಯಾತಿ ಪಡೆದಿರುವ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ (HKES) ಹೊಸ ಸದಸ್ಯತ್ವ ನೋಂದಣಿ ಪ್ರಕ್ರಿಯೆ ಈಗ ಇಡೀ ಭಾಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. 1958ರಲ್ಲಿ ದಿವಂಗತ ಮಹಾದೇವಪ್ಪ ರಾಂಪುರೆ ಅವರು ಈ ಭಾಗದ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗಲಿ ಎಂಬ ಸದಾಶಯದಿಂದ ಕಟ್ಟಿ ಬೆಳೆಸಿದ ಈ ಬೃಹತ್ ಸಂಸ್ಥೆ, ಇಂದು 40ಕ್ಕೂ ಹೆಚ್ಚು ಪ್ರತಿಷ್ಠಿತ ಕಾಲೇಜುಗಳು ಹಾಗೂ ಬಸವೇಶ್ವರ ಆಸ್ಪತ್ರೆಯೊಂದಿಗೆ ಹೆಮ್ಮರವಾಗಿ ಬೆಳೆದಿದೆ. ಆದರೆ, ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನವೆಂಬರ್ ತಿಂಗಳಿನಲ್ಲಿ ಆಡಳಿತ ಮಂಡಳಿಯು ಹೊಸ ಸದಸ್ಯತ್ವಕ್ಕಾಗಿ ಅಧಿಸೂಚನೆ ಹೊರಡಿಸುತ್ತಿದ್ದಂತೆಯೇ ಸಾರ್ವಜನಿಕ ವಲಯದಲ್ಲಿ ಪರ-ವಿರೋಧದ ಕೂಗು ಬಲವಾಗಿ ಕೇಳಿಬರುತ್ತಿದೆ.

ಸಂಸ್ಥೆಯ ಕಾರ್ಯಕಾರಿ ಸದಸ್ಯರು ಪತ್ರಿಕಾ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ಸದಸ್ಯತ್ವ ನೀಡುವುದಾಗಿ ಘೋಷಿಸಿದ್ದರೂ, ಜನಸಾಮಾನ್ಯರ ವಲಯದಲ್ಲಿ ತೀವ್ರ ಅಸಮಾಧಾನ ಮತ್ತು ಸಂಶಯ ಮನೆಮಾಡಿದೆ. “ಸೊಸೈಟಿ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ಆಡಳಿತ ಮತ್ತು ಅಧಿಕಾರ ಕೆಲವೇ ಕೆಲವು ಪ್ರಭಾವಿ ಕುಟುಂಬಗಳ ಸುತ್ತ ಗಿರಕಿ ಹೊಡೆಯುತ್ತಿದೆ” ಎಂಬುದು ಸಾರ್ವಜನಿಕರ ನೇರ ಆರೋಪವಾಗಿದೆ. “ನೀವು ತಪ್ಪಿದರೆ ಅವರು, ಅವರು ತಪ್ಪಿದರೆ ನಿಮ್ಮ ಮಕ್ಕಳು ಮತ್ತು ಬೆಂಬಲಿಗರು ಎಂಬಂತೆ ಸದಸ್ಯತ್ವ ಹಾಗೂ ಅಧ್ಯಕ್ಷಗಿರಿಯನ್ನು ಹಂಚಿಕೊಳ್ಳಲಾಗುತ್ತಿದೆ” ಎಂದು ಕಲ್ಯಾಣ ಕರ್ನಾಟಕದ ಪ್ರಜ್ಞಾವಂತ ನಾಗರಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಸಾರ್ವಜನಿಕರ ಪ್ರಮುಖ ಪ್ರಶ್ನೆಯೆಂದರೆ, ಕೇವಲ ಹೆಸರಿಗೆ ಮಾತ್ರ ಅರ್ಜಿಗಳನ್ನು ಆಹ್ವಾನಿಸಿ, ಅಂತಿಮವಾಗಿ ತಮ್ಮ ಕುಟುಂಬಸ್ಥರು ಮತ್ತು ಬೆಂಬಲಿಗರಿಗೆ ಮಾತ್ರ ಮಣೆ ಹಾಕುವ ಬದಲು, ನಿಜವಾದ ಶಿಕ್ಷಣ ಪ್ರೇಮಿಗಳು ಹಾಗೂ ಸಾಮಾನ್ಯ ನಾಗರಿಕರಿಗೆ ಏಕೆ ಮುಕ್ತ ಅವಕಾಶ ನೀಡಬಾರದು? ಸಂಸ್ಥೆಯ ಎಲ್ಲಾ ಅಧಿಕಾರ ಮತ್ತು ಸೌಲಭ್ಯಗಳನ್ನು ಕೆಲವೇ ಕುಟುಂಬಗಳು ಅನುಭವಿಸುವುದನ್ನು ಬಿಟ್ಟು, ಈ ಭಾಗದ ಇತರ ಸಮರ್ಥರಿಗೂ ಸದಸ್ಯತ್ವ ನೀಡಿ, ಕಲ್ಯಾಣ ಕರ್ನಾಟಕದ ಮೂಲೆ ಮೂಲೆಯಲ್ಲೂ ಹೊಸ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಆಡಳಿತ ಮಂಡಳಿ ಏಕೆ ಮುಂದಾಗಬಾರದು ಎಂಬ ಗಂಭೀರ ಪ್ರಶ್ನೆಯನ್ನು ಜನತೆ ಮುಂದಿಟ್ಟಿದ್ದಾರೆ.

ಸಾರ್ವಜನಿಕರ ಈ ಅನುಮಾನಕ್ಕೆ ಸಂಸ್ಥೆಯ ಬೈ-ಲಾ (By-laws) ನಿಯಮಗಳೇ ಪ್ರಮುಖ ಕಾರಣವಾಗಿವೆ. ಬೈ-ಲಾ ನಿಯಮ 7(B) ಪ್ರಕಾರ, ಕಲ್ಯಾಣ ಕರ್ನಾಟಕ ಭಾಗದ ಖಾಯಂ ನಿವಾಸಿಗಳು ನಿಗದಿತ ಅರ್ಜಿ ಮತ್ತು ಪ್ರವೇಶ ಶುಲ್ಕ ಪಾವತಿಸಿ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ, ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಸದಸ್ಯತ್ವ ಖಾತರಿಯಾಗುವುದಿಲ್ಲ; ಆಡಳಿತ ಮಂಡಳಿಯ ಸಭೆಯಲ್ಲಿ ಹಾಜರಿರುವ ಸದಸ್ಯರಲ್ಲಿ ಕನಿಷ್ಠ ಮೂರನೇ ಎರಡರಷ್ಟು (2/3) ಬಹುಮತ ದೊರೆತರೆ ಮಾತ್ರ ಸದಸ್ಯತ್ವ ನೀಡಲಾಗುತ್ತದೆ. ಜೊತೆಗೆ, ಯಾವುದೇ ಕಾರಣ ನೀಡದೆ ಅರ್ಜಿಯನ್ನು ತಿರಸ್ಕರಿಸುವ ಪರಮಾಧಿಕಾರ ಮಂಡಳಿಗಿರುವುದರಿಂದ, ಆಡಳಿತ ನಡೆಸುವವರು ತಮ್ಮ ಮತಬ್ಯಾಂಕ್ ಗಟ್ಟಿಮಾಡಿಕೊಳ್ಳಲು ಈ ನಿಯಮವನ್ನು ಬಳಸಿಕೊಳ್ಳುತ್ತಾರೆ ಎಂಬ ದೂರು ದಶಕಗಳಿಂದಲೂ ಇದೆ.

ಮತ್ತೊಂದೆಡೆ, ಈ ಎಲ್ಲಾ ಆರೋಪಗಳ ನಡುವೆ ಪ್ರಸ್ತುತ ಅಧ್ಯಕ್ಷರಾದ ಡಾ. ಶಶೀಲ್ ಜಿ. ನಮೋಶಿ ಅವರ ನೇತೃತ್ವದ ಆಡಳಿತ ಮಂಡಳಿಯು ತನ್ನದೇ ಆದ ಸ್ಪಷ್ಟ ನಿಲುವನ್ನು ಪ್ರತಿಪಾದಿಸುತ್ತಿದೆ. “ನಾವು ಯಾವುದೇ ತಾರತಮ್ಯವಿಲ್ಲದೆ, ಹೈಕೋರ್ಟ್ ನಿರ್ದೇಶನ ಹಾಗೂ ಸಂಸ್ಥೆಯ ಸಂವಿಧಾನಬದ್ಧ ಬೈ-ಲಾ ನಿಯಮಗಳ ಅಡಿಯಲ್ಲೇ ಪಾರದರ್ಶಕವಾಗಿ ಸದಸ್ಯತ್ವ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ” ಎಂದು ಮಂಡಳಿ ತಿಳಿಸಿದೆ. ಅರ್ಹತೆ ಇರುವ ಕಲ್ಯಾಣ ಕರ್ನಾಟಕದ ಯಾರು ಬೇಕಾದರೂ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಪಡೆಯಬಹುದು ಮತ್ತು ನಿಯಮಾನುಸಾರ ಪರಿಶೀಲನೆ ನಡೆಸಿ ಅರ್ಹರಿಗೆ ಸದಸ್ಯತ್ವ ನೀಡಲಾಗುವುದು ಎಂಬುದು ಆಡಳಿತ ಮಂಡಳಿಯ ಸಮರ್ಥನೆಯಾಗಿದೆ.

ಇದೇ ವೇಳೆ, ಸಂಸ್ಥೆಯ ಶೈಕ್ಷಣಿಕ ಪ್ರಗತಿಯ ಬಗ್ಗೆಯೂ ಆಡಳಿತ ಮಂಡಳಿ ಬೆಳಕು ಚೆಲ್ಲಿದೆ. ಸಂಸ್ಥೆಯ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ (MBBS) ಸೀಟುಗಳನ್ನು 150 ರಿಂದ 250ಕ್ಕೆ ಹೆಚ್ಚಿಸಿರುವುದು, ಬಸವೇಶ್ವರ ಆಸ್ಪತ್ರೆಯ ಆಧುನೀಕರಣ ಹಾಗೂ ತೈವಾನ್ ವಿಶ್ವವಿದ್ಯಾಲಯಗಳೊಂದಿಗೆ ವಿದ್ಯಾರ್ಥಿ ವಿನಿಮಯಕ್ಕಾಗಿ ‘ಸ್ಕೈರಿಮ್ ಇನ್ನೋವೇಶನ್’ ಜೊತೆ ಒಪ್ಪಂದ ಮಾಡಿಕೊಂಡಿರುವುದು ಸಂಸ್ಥೆಯ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ಮಂಡಳಿ ಹೇಳುತ್ತಿದೆ. ಸಂಸ್ಥೆಯ ಆಸ್ತಿ ಮತ್ತು ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಸದಸ್ಯತ್ವ ನೀಡುವಾಗ ಕಟ್ಟುನಿಟ್ಟಿನ ಪರಿಶೀಲನೆ ಅಗತ್ಯವಿದೆ ಎಂಬುದು ಆಡಳಿತ ವರ್ಗದ ವಾದವಾಗಿದೆ.

ಆದರೆ, ಅಭಿವೃದ್ಧಿ ಕಾರ್ಯಗಳ ನಡುವೆಯೂ ಆಡಳಿತ ವಿಕೇಂದ್ರೀಕರಣವಾಗಬೇಕು ಎಂಬುದು ಜನಸಾಮಾನ್ಯರ ಆಶಯವಾಗಿದೆ. ಮಹಾದೇವಪ್ಪ ರಾಂಪುರೆ, ಸಂಗಣ್ಣ ಅಗಡಿ, ಪೂಜ್ಯ ಶರಣಬಸವಪ್ಪ ಅಪ್ಪ, ಡಾ. ಎ.ಬಿ. ಮಾಲಕರೆಡ್ಡಿ, ಡಾ. ಬಿ.ಜಿ. ಜವಳಿ ಅಂತಹ ಮಹನೀಯರು ಕಟ್ಟಿ ಬೆಳೆಸಿದ ಈ ಸಂಸ್ಥೆ ಯಾವುದೇ ಒಂದು ಗುಂಪು ಅಥವಾ ಕುಟುಂಬದ ಸ್ವತ್ತಾಗಬಾರದು. ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಗಳು ಕೇವಲ ಪ್ರತಿಷ್ಠೆಯ ಕಣವಾಗದೆ, ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಕ್ರಾಂತಿಗೆ ಹೊಸ ದಿಕ್ಸೂಚಿಯಾಗಬೇಕು ಎಂಬುದು ಓದುಗರ ಮತ್ತು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಒಟ್ಟಿನಲ್ಲಿ, ಎಚ್.ಕೆ.ಇ ಸೊಸೈಟಿಯ ಹೊಸ ಸದಸ್ಯತ್ವ ಪ್ರಕ್ರಿಯೆಯು ಈಗ ಆಡಳಿತ ಮಂಡಳಿಯ ಪಾರದರ್ಶಕತೆಗೆ ದೊಡ್ಡ ಅಗ್ನಿಪರೀಕ್ಷೆಯಾಗಿದೆ. ಸಾರ್ವಜನಿಕರ ಆಕ್ರೋಶವನ್ನು ಶಮನಗೊಳಿಸಿ, ಸ್ವಜನಪಕ್ಷಪಾತಕ್ಕೆ ಅವಕಾಶ ನೀಡದೆ, ನಿಜವಾದ ಅರ್ಹರಿಗೆ ಸದಸ್ಯತ್ವ ನೀಡುವ ಮೂಲಕ ಆಡಳಿತ ಮಂಡಳಿ ತನ್ನ ಬದ್ಧತೆಯನ್ನು ಸಾಬೀತುಪಡಿಸುತ್ತದೆಯೇ ಅಥವಾ ಮತ್ತೆ ಹಳೆಯ ಆರೋಪಗಳಿಗೆ ಗುರಿಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಮರ್ಚೇಡ್ ಡೇಸ್ ವಿಶೇಷ ವರದಿ.

 

Share
Related Articles
ಸಿನಿಮಾಸುದ್ದಿ

 ಬೆಳ್ಳಿತೆರೆಯ ಮೇಲೆ ಕುರಿಗಾಹಿಗಳ ಬದುಕಿನ ನೈಜ ಅನಾವರಣ: ಇದೇ 27ಕ್ಕೆ ತೆರೆಗೆ ಬರಲಿದೆ ‘ಅನಂತ ಪಯಣ.

ಮರ್ಚೆಡ್ ಡೇಸ್|ಸಿನಿಮಾ ಪರಿಚಯ. ಕುರುಬ ಸಮುದಾಯದ ವಿಶಿಷ್ಟ ಸಂಸ್ಕೃತಿ, ಅಲೆಮಾರಿ ಬದುಕಿನ ಸಂಕಟ ಮತ್ತು ಸಾಮಾಜಿಕ...

ಸುದ್ದಿ

ಶಿಕ್ಷಣವು ಜೀವನದ ಪರಿಪೂರ್ಣ ಮೌಲ್ಯಗಳನ್ನು ರೂಪಿಸುವ ಸಾಧನ: ಡಾ. ಇಬ್ರಾಹಿಂ ಎಂ.ಕೆ.

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಎಸ್.ಕೆ.ಎನ್.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಭಾಗದ ಪ್ರಥಮ ವರ್ಷದ...

ಸುದ್ದಿ

ಅರ್ಥಶಾಸ್ತ್ರ ವಿದ್ಯಾರ್ಥಿಗಳಿಗೆ ವರದಾನ: ಡಾ. ಕೊಂತಮ್ ಸತೀಶ್ ಅವರಿಂದ ‘ಡೆವಲಪ್‌ಮೆಂಟ್ ಎಕನಾಮಿಕ್ಸ್’ ಕೃತಿ ರಚನೆ.

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಉಪನ್ಯಾಸಕರು, ಸಂಶೋಧಕರು ಹಾಗೂ ಲೇಖಕರಾದ ಡಾ. ಸತೀಶ್ ಅವರ ಶೈಕ್ಷಣಿಕ ಕೊಡುಗೆಗೆ...