


ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.
ಗಂಗಾವತಿ: ನಗರದ 19ನೇ ವಾರ್ಡಿನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCWD – 2802) ಅಡಿಯಲ್ಲಿ ಗಂಗಾವತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ (ಮೆಡಿಕಲ್ ಮತ್ತು ಇಂಜಿನಿಯರಿಂಗ್) ಬಾಲಕಿಯರ ವಸತಿ ನಿಲಯ’ಕ್ಕೆ ಖಾಸಗಿ ಬಾಡಿಗೆ ಕಟ್ಟಡವನ್ನು ಪಡೆಯಲಾಗಿದೆ. ಆದರೆ ಈ ಹಾಸ್ಟೆಲ್ ಸುತ್ತಲೂ ಸಮರ್ಪಕ ಒಳಚರಂಡಿ ವ್ಯವಸ್ಥೆ ಕಲ್ಪಿಸದ ಪರಿಣಾಮ ಸ್ಥಳೀಯ ವಡ್ಡರ ಓಣಿಯ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಕಟ್ಟಡದ ಹಿಂಭಾಗದಲ್ಲಿ ಮಿಕ್ಕಿದ ಅನ್ನ, ಸಾರು ಸೇರಿದಂತೆ ತ್ಯಾಜ್ಯ ಪದಾರ್ಥಗಳನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿದ್ದು, ಇಡೀ ಬಡಾವಣೆಯ ತುಂಬಾ ಅಸಹನೀಯ ದುರ್ವಾಸನೆ ಹರಡಿದೆ. ಇದರಿಂದಾಗಿ ಸ್ಥಳೀಯರು ನಿತ್ಯ ಮೂಗು ಮುಚ್ಚಿಕೊಂಡೇ ಸಂಚರಿಸುವ ದುಃಸ್ಥಿತಿ ನಿರ್ಮಾಣವಾಗಿದೆ.
ಹಾಸ್ಟೆಲ್ನ ಸ್ನಾನಗೃಹ ಮತ್ತು ಶೌಚಾಲಯದ ಕೊಳಚೆ ನೀರು ನೇರವಾಗಿ ವಡ್ಡರ ಓಣಿಯ ಹಿಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಹರಿಯುತ್ತಿದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ನೀರೆಲ್ಲಾ ಮಾರ್ಗಮಧ್ಯದಲ್ಲೇ ನಿಂತು ರಸ್ತೆಯೇ ತುಂಬಾ ಕೊಚ್ಚೆ ನೀರು ಹರಿಯುತ್ತಿದೆ. ಮಂಗಳವಾರ ಬೆಳಿಗ್ಗೆ ಹಾಸ್ಟೆಲ್ ಹಿಂಭಾಗ ಪ್ರತಿಷ್ಠಾಪಿಸಿದ್ದ ಗಣೇಶನ ಮಂಟಪದ ಒಳಗೂ ಈ ಕೊಳಚೆ ನೀರು ನುಗ್ಗಿದ್ದು, ಭಕ್ತರು ಹಾಗೂ ಸ್ಥಳೀಯ ನಿವಾಸಿಗಳಿಗೆ ತೀವ್ರ ಮುಜುಗರ ಹಾಗೂ ಆಕ್ರೋಶ ಉಂಟುಮಾಡಿದೆ.
ಕಳೆದ ಆರು ತಿಂಗಳಿಂದ ಹಾಸ್ಟೆಲ್ ಸುತ್ತಲೂ ಚರಂಡಿ ನೀರು ತುಂಬಿ ಓಣಿಯಲ್ಲೆಲ್ಲ ಹರಿಯುತ್ತಿದ್ದರೂ ಸಂಬಂಧಪಟ್ಟ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಾಗಲಿ ಅಥವಾ ಕಟ್ಟಡದ ಮಾಲೀಕರಾಗಲಿ ಕ್ಯಾರೆ ಎನ್ನುತ್ತಿಲ್ಲ. ರಸ್ತೆಯಲ್ಲಿ ಮಡುಗಟ್ಟಿರುವ ಕೊಳಕು ನೀರಿನಿಂದಾಗಿ ಸೊಳ್ಳೆಗಳು ಹಾಗೂ ಹಂದಿಗಳ ಕಾಟ ಮಿತಿಮೀರಿದೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದ್ದು, ಮುಖ್ಯವಾಗಿ ಪುಟ್ಟ ಮಕ್ಕಳು ಹಾಗೂ ವಯೋವೃದ್ಧರ ಹಾಗೂ ಹಾಸ್ಟೆಲ್ ವಿದ್ಯಾರ್ಥಿನಿಯರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತಿದೆ.
ರಸ್ತೆಯಲ್ಲಿ ಹರಿಯುತ್ತಿರುವ ಮಲಿನ ನೀರಿನಿಂದಾಗಿ ಜನರು ಮನೆಗಳಿಂದ ಹೊರಬರಲು ಹಿಂದೇಟು ಹಾಕುವಂತಾಗಿದೆ. ವೃದ್ಧರು ಮತ್ತು ಮಹಿಳೆಯರು ಚಪ್ಪಲಿ ಇಲ್ಲದೆ ನಡೆದುಕೊಂಡು ಹೋಗಲೂ ಸಾಧ್ಯವಾಗದ ಪರಿಸ್ಥಿತಿ ತಲೆದೋರಿದೆ. ಮುಚ್ಚಿಹೋಗಿರುವ ಮೋರಿಗಳನ್ನು ಕೂಡಲೇ ಸ್ವಚ್ಛಗೊಳಿಸಿ, ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಿದರೆ ಮಾತ್ರ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಸ್ಥಳೀಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ಅವ್ಯವಸ್ಥೆಯ ಬಗ್ಗೆ ಕಟ್ಟಡದ ಮಾಲೀಕರಿಗೆ ಹಲವು ಬಾರಿ ಮನವಿ ಮಾಡಿದರೂ ಅವರು ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಡಿಗೆ ಪಡೆದ ಕಟ್ಟಡದಲ್ಲಿ ಕನಿಷ್ಠ ಒಳಚರಂಡಿ ಸೌಕರ್ಯಗಳನ್ನೂ ಕಲ್ಪಿಸದೆ ಅಕ್ಕಪಕ್ಕದ ಸಾರ್ವಜನಿಕರ ಜೀವದೊಂದಿಗೆ ಆಟವಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ನಗರಸಭೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಬಿ.ಸಿ.ಎಂ (BCWD) ಇಲಾಖೆಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸ್ನಾನಗೃಹ ಮತ್ತು ಶೌಚಾಲಯದ ನೀರು ನೇರವಾಗಿ ರಸ್ತೆಗೆ ಬಾರದಂತೆ ಸೂಕ್ತ ಪೈಪ್ಲೈನ್ ಅಳವಡಿಸಿ, ಚರಂಡಿಗೆ ವ್ಯವಸ್ಥಿತ ಸಂಪರ್ಕ ಕಲ್ಪಿಸಬೇಕಿದೆ. ನಿಯಮಗಳನ್ನು ಗಾಳಿಗೆ ತೂರಿ ಸಾರ್ವಜನಿಕರ ಆರೋಗ್ಯಕ್ಕೆ ಸಂಚಕಾರ ತಂದಿರುವ ಕಟ್ಟಡ ಮಾಲೀಕರ ವಿರುದ್ಧ ನಗರಸಭೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಜನವಸತಿ ಪ್ರದೇಶದಲ್ಲಿ ನಿರಂತರ ಕಿರಿಕಿರಿ ಉಂಟುಮಾಡುತ್ತಿರುವ ಈ ಹಾಸ್ಟೆಲ್ ಅನ್ನು ಕೂಡಲೇ ಬೇರೆಡೆಗೆ ಸ್ಥಳಾಂತರಿಸಬೇಕೆಂದು ಸ್ಥಳೀಯ ನಿವಾಸಿಗಳಾದ ಅಂಬಿಕಾ, ಅನಿಲ್ ಮತ್ತು ಇತರರು ಒಕ್ಕೊರಲಿನಿಂದ ತೀವ್ರವಾಗಿ ಆಗ್ರಹಿಸಿದ್ದಾರೆ.